ಮೈಸೂರು

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೆ ಪರಿವರ್ತನೆಯಾಗಲು ಪ್ರಯತ್ನಿಸಿ: ಎಸಿಪಿ ಎಂ.ಎನ್.ಶಶೀಧರ್

ಮೈಸೂರು,ಡಿ.2-ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇಂದು ದೇವರಾಜ ವಿಭಾಗದ ಎಸಿಪಿ ಎಂ.ಎನ್.ಶಶೀಧರ್ ಅವರು ರೌಡಿ ಶೀಟರ್ ಪೆರೇಡ್ ನಡೆಸಿದರು.

ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯ 21, ಲಷ್ಕರ್ ಪೊಲೀಸ್ ಠಾಣೆ ವ್ಯಾಪ್ತಿಯ 19, ನಜರ್ ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ 28, ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ 63, ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ 20 ಮಂದಿ ಸೇರಿದಂತೆ ಒಟ್ಟು 151 ಮಂದಿ ರೌಡಿ ಶೀಟರ್ ಗಳು ಪೆರೇಡ್ ವೇಳೆ ಹಾಜರಿದ್ದರು.

ಈ ವೇಳೆ ಅವರನ್ನುದ್ದೇಶಿಸಿ ಮಾತನಾಡಿದ ಶಶೀಧರ್ ಅವರು, ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕು. ಕಾನೂನಿನಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ನಿಲ್ಲಿಸಿ. ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮ ಕುಟುಂಬದವರ ಬಗ್ಗೆ ಯೋಚನೆ ಮಾಡಿ. ಪರಿವರ್ತನೆ ಜಗದ ನಿಯಮ. ಮನುಷ್ಯ ಪರಿವರ್ತನೆಯಾಗಬೇಕು. ಪರಿವರ್ತನೆಯಾಗಲು ಪ್ರಯತ್ನಿಸಿ ಎಂದರು.

ಕೆಲ ಸಂದರ್ಭದಲ್ಲಿ ರೌಡಿ ಶೀಟರ್ ತೆಗೆದ ತಕ್ಷಣ ಮತ್ತೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಪೊಲೀಸರು ರೌಡಿ ಶೀಟರ್ ತೆಗೆಯಲು ಹಿಂದೇಟು ಹಾಕುತ್ತಾರೆ. ನೀವು ಮತ್ತೆ ಇಂತಹ ಚಟುವಟಿಕೆಗಳನ್ನು ಭಾಗಿಯಾಗುವುದಿಲ್ಲ ಎಂಬ ನಂಬಿಕೆ ಬಂದರೆ ಖಂಡಿತ ರೌಡಿ ಶೀಟರ್ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆದು ಹಾಕುತ್ತಾರೆ ಎಂದರು.

ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ರೌಡಿ ಶೀಟರ್ ಇರುವುದು ಶೋಭೆಯಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಪೊಲೀಸರು ಇರುವುದು. ನೀವು ಸೇರಿದಂತೆ ಪ್ರತಿಯೊಬ್ಬರು ನಮಗೆ ಸಹಕಾರ ನೀಡಬೇಕು. ಅಪರಾಧ ಚಟುವಟಿಕೆಗಳ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಇತ್ತೀಚೆಗೆ ರೌಡಿಗಳನ್ನು ವೈಭವೀಕರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಫ್ಲೆಕ್ಸ್ ಗಳನ್ನು ಹಾಕಿಸುವುದು, ಅವರ ಹುಟ್ಟುಹಬ್ಬ ಆಚರಿಸಿ ಸಿಹಿ ಹಂಚುವ ಕೆಲಸ ಮಾಡುತ್ತಿದ್ದಾರೆ. ಅವರು ಯಾವ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಎಂದು ಅವರನ್ನು ವೈಭವೀಕರಿಸಬೇಕು ಎಂದು ಪ್ರಶ್ನಿಸಿದ ಅವರು, ಇಂತಹ ಕೆಲಸಗಳನ್ನು ನಿಲ್ಲಿಸಬೇಕು ಎಂದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: