ಮೈಸೂರು

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಕ್ಷತ್ರಗಳ ರಸಸಂಜೆ ಕಾರ್ಯಕ್ರಮ : ಹರಿದ ಗಾನಸುಧೆ

ಮೈಸೂರು, ಡಿ.3:- ನಗರದ ನಾದಬ್ರಹ್ಮ ವೀಣೆ ಶೇಷಣ್ಣ ಭವನದ ಸಭಾಂಗಣದಲ್ಲಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಧುರಗಾನ ಕಲಾವೃಂದದ ವತಿಯಿಂದ ನಕ್ಷತ್ರಗಳ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜ್ಯೂನಿಯರ್ ರಾಜ್ಕುಮಾರ್ ಎಂದೇ ಖ್ಯಾತರಾಗಿರುವ ಸಂಸ್ಥೆಯ ಅಧ್ಯಕ್ಷ ರಮೇಶ್ಕುಮಾರ್ ಅವರು ತಮ್ಮ ಕೋಗಿಲೆಯ ಕಂಠದಿಂದ ಡಾ.ರಾಜ್ಕುಮಾರ್ ಅವರು ಅಭಿನಯಿಸಿ, ಹಿನ್ನೆಲೆ ಗಾಯನ ನೀಡಿದ್ದ ಕೆಲವು ಹಾಡುಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಆಂಜನೇಯನ ಸ್ತುತಿಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಗಂಧದ ಗುಡಿ, ಗಿರಿಕನ್ಯೆ, ನಾನೊಬ್ಬ ಕಳ್ಳ ಹೀಗೆ ಹತ್ತು ಹಲವಾರು ಚಿತ್ರಗಳ ಗೀತೆಗಳನ್ನು ಮೂರು ಗಂಟೆಗಳ ಕಾಲ ಪ್ರಸ್ತುತಪಡಿಸಲಾಯಿತು. ಚಿಕ್ಕಮಗಳೂರು ರಶ್ಮಿ, ಶಶಿಕಲಾ, ವಿಶ್ವನಾಥ್, ಸಹೋದರರಾದ ನಟರಾಜ್ ಹಾಗೂ ಸುಧೀಂದ್ರ ಉತ್ತಮ ಸಹಕಾರ ನೀಡಿದರು. ಮತ್ತೊಂದು ವಿಶೇಷ ಎಂದರೆ ರಮೇಶ್ ಕುಮಾರ್ ಮೊಮ್ಮಗಳು ನರ್ತಿಸಿ ಹಾಡಿದ ಗಂಧದಗುಡಿ ಚಿತ್ರದ ‘ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ’ ಹಾಡಿಗೆ ಪ್ರೇಕ್ಷಕರು ಎದ್ದು ನಿಂತು ಕರತಾಡನ ನೀಡಿದರು. ಸಾಹಸಸಿಂಹ ಡಾ.ವಿಷ್ಣುವರ್ಧನ್ ಕಟ್ಟಾಭಿಮಾನಿ ಪಾರ್ಥಸಾರಥಿ ಹಾಡಿದ ‘ಹೊಂಬಿಸಿಲು’ ಚಿತ್ರದ ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’ ಗೀತೆಗೆ ಪ್ರೇಕ್ಷಕರು ಮಂತ್ರಮುಗ್ಧರಾದರು.
ಕೋವಿಡ್-19 ಕೊರೊನಾ ಮಹಾಮಾರಿ ಕಾಯಿಲೆಯಿಂದ ಕಳೆದ ಏಳೆಂಟು ತಿಂಗಳಿಂದ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ನಡೆದಿರಲಿಲ್ಲ. ಇದರಿಂದ ಸಂಗೀತ ಪ್ರಿಯರು ಮನೆಯಲ್ಲಿಯೇ ಕುಳಿತು ಸಮಯ ಕಳೆಯುವ ಬೇಸರದ ಸನ್ನಿವೇಶ ಉದ್ಭವಿಸಿತ್ತು. ಇದೀಗ ಪುನಃ ಎಂದಿನಂತೆ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂಗೀತ ಪ್ರಿಯರಿಗೆ ಕೊಂಚ ನೆಮ್ಮದಿ ತಂದಿದೆ.
ಕಾರ್ಯಕ್ರಮಕ್ಕೂ ಮುನ್ನ ಉದ್ಯಮಿ ನೀಲಕಂಠ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಸಮಾಜ ಸೇವಕರಾದ ಡಾ.ರಘುರಾಂ ವಾಜಪೇಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಪಾತಿ ಫೌಂಡೇಷನ್ ಸಂಸ್ಥಾಪಕ ಪಾರ್ಥಸಾರಥಿ (ಪಾತಿ), ರಮೇಶ್ಕುಮಾರ್ ವೇದಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: