ಮೈಸೂರು

ದಾಸಸಾಹಿತ್ಯ ಮತ್ತು ಸಂಗೀತದ ಮೂಲಕ ಮೇಲುಕೀಳು ಹೋಗಲಾಡಿಸುವ ನಿಟ್ಟಿನಲ್ಲಿ ಮಹತ್ತರ ಕಾಣಿಕೆ ನೀಡಿದವರು ಕನಕದಾಸರು : ಡಾ. ಬಿ. ಆರ್. ಜಯಕುಮಾರಿ

ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನಕದಾಸ ಜಯಂತಿ ಆಚರಣೆ

ಮೈಸೂರು, ಡಿ. 3 :- ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಎಸ್ ಬಿಆರ್ ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾಸ ಶ್ರೇಷ್ಠರಾದ ‘ಕನಕದಾಸರ ಜನ್ಮದಿನಾಚರಣೆ’ ಯನ್ನು ಸರಳವಾಗಿ ಆಚರಿಸಲಾಯಿತು.
ಎಸ್.ಬಿ.ಆರ್.ಆರ್. ಮಹಾಜನ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಆರ್. ಜಯಕುಮಾರಿ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇರ ವರ್ಗದವರು ಕನಕದಾಸರಿಗೆ ಪುಷ್ಪಾರ್ಚನೆಗೈದು ಗೌರವ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಆರ್. ಜಯಕುಮಾರಿ ಮಾತನಾಡಿ, ಕನಕದಾಸರು ಕರ್ನಾಟಕದ ಹರಿದಾಸ ಸಾಹಿತ್ಯದ ಶ್ರೇಷ್ಠ ಕವಿಪುಂಗವರೆಂದೇ ಪ್ರಸಿದ್ಧರಾಗಿರುವ ದಾಸವೇಣ್ಯರು. ಕರ್ನಾಟಕ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿನ ಕುರುಬ ಜನಾಂಗದಲ್ಲಿ ಹುಟ್ಟಿದ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಸೈನಿಕ ವೃತ್ತಿಯನ್ನು ತೊರೆದು, ಜೀವನದಲ್ಲಿ ವೈರಾಗ್ಯವನ್ನು ಪಡೆದು, ಭಕ್ತಿ ಪಥವನ್ನು ಅನುಸರಿಸಿ, ಕಾಗಿನೆಲೆ ಆದಿಕೇಶವನನ್ನು ತಮ್ಮ ಆರಾಧ್ಯ ದೈವವಾಗಿ ಸ್ವೀಕರಿಸಿದವರು. ಭಕ್ತಿ ಸಾಧನೆಗಾಗಿ ಊರೂರು ಅಲೆಯುತ್ತಾ, ಹಲವಾರು ಕೀರ್ತನೆಗಳನ್ನು, ಭಜನೆಗಳನ್ನು ರಚಿಸಿ, ಹಾಡುತ್ತಾ ಜನತೆಯಲ್ಲಿ ಭಕ್ತಿಪಂಥದ ಜಾಗೃತಿಯನ್ನು ಉಂಟುಮಾಡಿದವರು.
ಹಂಪಿಯ ವ್ಯಾಸರಾಜರನ್ನು ಗುರುವಾಗಿ ಸ್ವೀಕರಿಸಿ, ವೇದ, ಉಪನಿಷತ್ತುಗಳ ಜ್ಞಾನ ಸಂಪಾದಿಸಿದರು. ನಾಡಿನಾದ್ಯಂತ ಸಂಚರಿಸಿ, ತಾವು ಸಂಪಾದಿಸಿದ ಕೀರ್ತನೆಗಳು, ಉಗಾಭೋಗಗಳು ಮತ್ತು ಮಂಡಿಗೆಗಳನ್ನು ಹಾಡುತ್ತಾ, ಜಾತಿಯ ಮೇಲುಕೀಳುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನತೆಗೆ ಸಾಮಾಜಿಕ ಚಿಂತನೆಗಳನ್ನು ತಮ್ಮ ದಾಸಸಾಹಿತ್ಯ ಮತ್ತು ಸಂಗೀತದ ಮೂಲಕ ಮಹತ್ತರ ಕಾಣಿಕೆ ಸಲ್ಲಿಸಿದವರು ಎಂದರು.
‘ನಾನು ಹೋದರೆ ಹೋದೇನು’ ಎನ್ನುವುದು ಕನಕದಾಸರ ಪ್ರಸಿದ್ಧ ಉಕ್ತಿ. ಇದನ್ನು ಒಂದು ಪಂಡಿತರ ಸಭೆಯಲ್ಲಿ ಯಾರು ಸ್ವರ್ಗಕ್ಕೆ ಹೋಗಬಹುದು ಎನ್ನುವ ಪ್ರಶ್ನೆ ಎದ್ದಾಗ ಹಾಗೆ ಹೇಳಿದ್ದರು ಎಂದು ಆ ಘಟನೆಯನ್ನು ವಿವರಿಸಿದರು. ಕನಕದಾಸರಿಗೆ ಕಾಗಿನೆಲೆ ಆದಿಕೇಶವನಂತೆ ಉಡುಪಿಯ ಶ್ರೀಕೃಷ್ಣನಿಗೂ ಅವಿನಾಭಾವ ಸಂಬಂಧವಿದೆ ಎಂದು ಉಡುಪಿಯ ‘ಕನಕನ ಕಿಂಡಿ’ಯ ಘಟನೆಯನ್ನು ಉದಾಹರಿಸಿದರು.
ಕನಕದಾಸರು ದಾಸರಷ್ಟೇ ಅಲ್ಲ, ಕವಿಗಳು ಕೂಡ. ಕನ್ನಡ ಸಾಹಿತ್ಯಕ್ಕೆ ಅವರು ಅಪಾರ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವರ ಕೃತಿಗಳಲ್ಲಿ ಹರಿಭಕ್ತಸಾರ, ನಳಚರಿತೆ, ರಾಮಧ್ಯಾನಚರಿತೆ ಮತ್ತು ಮೋಹನ ತರಂಗಿಣಿ ಮುಂತಾದವುಗಳು ಪ್ರಸಿದ್ಧವಾಗಿದೆ, ಇವಿಷ್ಟೇ ಅಲ್ಲದೆ, ಕರ್ನಾಟಕ ಸಂಗೀತದಲ್ಲಿ ಸುಮಾರು 240ಕ್ಕೂ ಹೆಚ್ಚು ಕೀರ್ತನೆಗಳು, ಉಗಾಭೋಗಗಳನ್ನು ರಚಿಸಿ, ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ರಚಿಸಿದ್ದಾರೆ ಎಂದರು.
ಸಂತ ಕನಕದಾಸರು ನೂರಾರು ವರ್ಷಗಳ ಹಿಂದೆಯೇ ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ ಬಲ್ಲಿರಾ? ಎನ್ನುವ ಮೂಲಕ ವರ್ಣಾಶ್ರಮ ವ್ಯವಸ್ಥೆ ಸೃಷ್ಟಿಸಿರುವ ಜಾತಿ ಪದ್ಧತಿಯನ್ನು ದಿಟ್ಟವಾಗಿ ಪ್ರಶ್ನಿಸಿದವರು. ಸಮಾಜದ ಮೇಲು, ಕೀಳು, ಜಾತಿ ಮತದ ಸಿದ್ಧಾಂತದ ವಿರುದ್ಧ ಪ್ರತಿಭಟನಾ ನೆಲೆಗಟ್ಟಿನಲ್ಲಿ ಕನಕದಾಸರು ತಮ್ಮ ಸಾಹಿತ್ಯ ಪ್ರಕಾರಗಳಲ್ಲಿ ವೈಚಾರಿಕ ಪ್ರಭೆ ತಂದವರು. ಭಕ್ತಿಪಂಥದ ಮೂಲಕ ಸಮಾಜದಲ್ಲಿನ ಮೌಢ್ಯ ನಿವಾರಿಸಲು ಶ್ರಮಿಸಿದವರು. ಅವರು ಸಾರಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದರಲ್ಲದೆ ಎಲ್ಲರಿಗೂ ಕನಕದಾಸ ಜಯಂತಿಯ ಶುಭಾಶಯಗಳನ್ನು ಕೋರಿದರು.
ಸಮಾರಂಭದಲ್ಲಿ ಕಾಲೇಜಿನ ಎಲ್ಲಾ ವಿಭಾಗಗಳ ಬೋಧಕ, ಮತ್ತು ಬೋಧಕೇತರ ವರ್ಗ, ಉಪಸ್ಥತರಿದ್ದು, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಗೌರವ ಸರ್ಮಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: