ಮೈಸೂರು

ಮರಾಠಾ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕದ ಹಿತಾಸಕ್ತಿಗೆ ತದ್ವಿರುದ್ಧವಾದ ಕೆಟ್ಟ ಪ್ರಯತ್ನ : ಪ್ರೊ.ಮಹೇಶ್ಚಂದ್ರಗುರು

ಕರ್ನಾಟಕದ ಇತಿಹಾಸದಲ್ಲಿ ಯಡಿಯೂರಪ್ಪನವರು ಓರ್ವ ಖಳನಾಯಕನಾಗಿ ಉಳಿಯಬಾರದು : ಪ್ರೊ.ಮಹೇಶ್ಚಂದ್ರಗುರು ಮನವಿ

ಮೈಸೂರು,ಡಿ.4:- ಮರಾಠಾ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕದ ಹಿತಾಸಕ್ತಿಗೆ ತದ್ವಿರುದ್ಧವಾದ ಕೆಟ್ಟ ಪ್ರಯತ್ನ ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮಹೇಶ್ಚಂದ್ರಗುರು ಟೀಕಿಸಿದರು.
ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮರಾಠಾ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕದ ಹಿತಾಸಕ್ತಿಗೆ ತದ್ವಿರುದ್ಧವಾದ ಕೆಟ್ಟ ಪ್ರಯತ್ನ. ಯಡಿಯೂರಪ್ಪನವರು ತಮ್ಮ ಅವಿವೇಕವನ್ನು ತಮ್ಮ ಹೊಣೆಗೇಡಿತನವನ್ನು ಪ್ರಕಟಪಡಿಸಿದ್ದಾರೆ ಎಂದರು.
ಆಯೋಗಗಳನ್ನು ಮಾಡುವುದರಿಂದ ಒಂದಷ್ಟು ಜನ ಗೂಟದ ಕಾರಿನಲ್ಲಿ ಓಡಾಡ್ತಾರೆ, ಒಂದಷ್ಟು ಜನರಿಗೆ ಆಫೀಸು ಸಿಗತ್ತೆ, ದುಡ್ಡು ಕಾಸು ಸಿಗತ್ತೆ, ಅಧಿಕಾರ ಸಿಗತ್ತೆ, ಆದರೆ ಈ ನಮ್ಮ ಜನ ಮಾತ್ರ ಖಂಡಿತ ಉದ್ಧಾರವಾಗಲ್ಲ, ಈ ಸತ್ಯವನ್ನು ಯಡಿಯೂರಪ್ಪನವರು ಅರ್ಥ ಮಾಡಿಕೊಂಡು ಕರ್ನಾಟಕದ ಇತಿಹಾಸದಲ್ಲಿ ಓರ್ವ ಖಳನಾಯಕನಾಗಿ ಉಳಿಯಬಾರದು ಅನ್ನೋದು ನಮ್ಮ ಕಳಕಳಿ ಎಂದರು.
ಯಾವ ಜನಾಂಗಕ್ಕೂ ಪ್ರಾಧಿಕಾರ ಬೇಕಾಗಿಲ್ಲ, ಈಗಾಗಲೇ ಸಂವಿಧಾನಾತ್ಮಕವಾಗಿ ಅವಕಾಶಗಳಿವೆ. ಎಸ್ ಸಿ ಎಸ್ ಟಿ, 2ಎ,2ಬಿ, 3ಎ, 3ಬಿ ಇತ್ಯಾದಿಗಳಿವೆ. ಅವುಗಳನ್ನೇ ಸರಿಯಾಗಿ ಅನುಷ್ಠಾನಗೊಳಿಸಿ, ಆ ಸಂವಿಧಾನಾತ್ಮಕ ಅವಕಾಶಗಳನ್ನು, ಪರಿಚ್ಛೇದಗಳನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡು ನಮ್ಮ ದೇಶದ ಜನರಿಗೆ ಎಲ್ಲರಿಗೂ ಶಿಕ್ಷಣ, ಉದ್ಯೋಗ ಎಲ್ಲದರಲ್ಲಿಯೂ ಅವಕಾಶ ಕೊಡಿ, ರಾಜಕಾರಣ, ಜಾತಿ ಕೇಂದ್ರಿತ, ಭಾಷೆ ಕೇಂದ್ರಿತ ಆಯೋಗಗಳ ರಚನೆ ಅಖಂಡ ಕರ್ನಾಟಕದ ಕನಸಿಗೆ ಅತ್ಯಂತ ಕೊಡಲಿಪೆಟ್ಟು ಕೊಡಲಿದೆ ಎಂದರು.
ಅಸ್ಪೃಶ್ಯರಿಗೆ ಮಾತ್ರ ಎಸ್ ಸಿ ಎಸ್ ಟಿ ಮೀಸಲಾತಿ ಸಿಗಬೇಕು. ರಾಷ್ಟ್ರೀಯ ಮುಖ್ಯವಾಹಿನಿಯಿಂದ ಹೊರದಬ್ಬಲ್ಪಟ್ಟ ನಮ್ಮ ಆದಿವಾಸಿಗಳಿಗೆ, ಕಾಡನ್ನು ಉಳಿಸಿ ನಾಡನ್ನು ರಕ್ಷಣೆ ಮಾಡತಕ್ಕಂತಹ ಕರ್ಮಯೋಗಿಗಳಿಗೆ ಸಿಗಬೇಕು. ಜೇನುಕುರುಬ, ಕಾಡು ಕುರುಬ, ಊರಲ್ಲಿರೋ ಕುರುಬರು ಎಸ್ ಟಿ ಗಳ ಲಾಭ ಪಡೆದು ನಿಜವಾದ ಫಲಾನುಭವಿಗಳಿಗೆ ದ್ರೋಹ ಬಗೆಯುತ್ತಿದ್ದಾರೆ. ಇದು ಒಳ್ಳೆಯ ಸಂಸ್ಕಾರ ಅಲ್ಲ. ಹಾಗೆ ಕುರುಬರಿಗೆ ಎಸ್ ಟಿ ಕೊಡತಕ್ಕಂತದ್ದು, ನಾಯಕರಿಗೆ ಎಸ್ ಟಿ ಕೊಡತಕ್ಕಂತದ್ದು ಓಲೈಕೆ ರಾಜಕಾರಣ. ಈ ಸರ್ಕಾರಗಳು ಖಂಡಿತ ಉದ್ಧಾರವಾಗಲ್ಲ. ಈಗಾಗಲೇ ಸಂವಿಧಾನದಲ್ಲಿ ಶ್ರೇಷ್ಠ ವಿಧಿವಿಧಾನಗಳಿವೆ. ಅವುಗಳನ್ನು ಅನುಷ್ಠಾನಗೊಳಿಸಿ, ಎಲ್ಲರನ್ನೂ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಕೊಂಡೊಯ್ಯಿರಿ. ಎಲ್ಲರಿಗೂ ಈ ದೇಶದಲ್ಲಿ ಬದುಕುವ ಅವಕಾಶವಿದೆ. ಭೂತಾಯಿ, ಪ್ರಕೃತಿ ಮಾತೆ ನಮ್ಮೆಲ್ಲರಿಗೂ ಜಾಗ ಕೊಟ್ಟಿದ್ಧಾಳೆ. ದೇಶವನ್ನು ಎಲ್ಲರೂ ಸೇರಿ ಅಖಂಡತೆಯೆಡೆಗೆ ಪ್ರಬುದ್ಧತೆಯೆಡೆಗೆ ಮುನ್ನಡೆಸಬೇಕು ಎಂದರು.
ಇವತ್ತು ನಮ್ಮನ್ನು ಆಳುತ್ತಿರುವವರು ರೈತ ವಿರೋಧಿಗಳು, ಕಾರ್ಮಿಕ ವಿರೋಧಿಗಳು, ಪ್ರಕೃತಿ ವಿರೋಧಿಗಳು, ಬಡವರ ವಿರೋಧಿಗಳು. ಇವತ್ತಿನ ಸಂದರ್ಭದಲ್ಲಿ ಬಲಿಷ್ಠರ ಸರ್ಕಾರ ಬಡವರನ್ನು ದಮನ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ ಎಂದು ಕಿಡಿಕಾರಿದರು. ರೈತರ ಜೀವಕ್ಕೆ ಬೆಲೆ ಇಲ್ಲ, ದಲಿತರ ಜೀವಕ್ಕೆ ಬೆಲೆ ಇಲ್ಲ, ಕೋವಿಡ್ 19 ಸಂಕಷ್ಟದ ಕಾಲದಲ್ಲಿ ಕಾರ್ಮಿಕರು ಅತಂತ್ರರಾಗಿ ಬೀದಿಬದಿಯಲ್ಲಿ ಸತ್ತಿದ್ದಾರೆ. ಇವತ್ತು ದೆಹಲಿಯಲ್ಲಿ ಅತ್ಯಂತ ದೊಡ್ಡ ಬೆಳವಣಿಗೆ ಆಗುತ್ತಿದೆ. ಲಕ್ಷಾಂತರ ರೈತರು, ಕಾರ್ಮಿಕರು, ಪಂಜಾಬ್ ಹರಿಯಾಣ, ಎಲ್ಲ ಕಡೆಯಿಂದ ಬಂದು ಲಗ್ಗೆ ಇಟ್ಟಿದ್ದಾರೆ. ಪಾರ್ಲಿಮೆಂಟ್ ಚಲೋ, ಪಾರ್ಲಿಮೆಂಟ್ ಗೆ ದಾಳಿ ಮಾಡಿ ಅಂತ ನಾನು ಹೇಳಲ್ಲ, ಅಧಿಕಾರಸ್ಥರನ್ನು ಹಿಂಸೆಗೆ ಗುರಿ ಪಡಿಸಿ ಅಂತ ನಾನು ಹೇಳಲ್ಲ, ನಮಗೆ ಸಂವಿಧಾನ ಬ್ಯಾಲೆಟ್ ಪವರ್ ಕೊಟ್ಟಿದೆ. ಆ ಬ್ಯಾಲೆಟ್ ಪವರ್ ನ್ನು ಸದ್ಬಳಕೆ ಮಾಡಿಕೊಂಡು ಈ ವರ್ಗ ಶತ್ರುಗಳನ್ನು ಅಧಿಕಾರದಿಂದ ಇಳಿಸಬೇಕು, ರೈತಪರ, ಮಹಿಳಾಪರ, ಕಾರ್ಮಿಕ ಪರ ಸರ್ಕಾರ, ಶೂದ್ರಾತಿಶೂದ್ರಪರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಈ ಸರ್ಕಾರವನ್ನು ಅತ್ಯಂತ ಪ್ರೀತಿಯಿಂದ, ಅಹಿಂಸಾತ್ಮಕವಾಗಿ ಕಿತ್ತೆಸೆಯಬೇಕು. ಇಲ್ಲದಿದ್ದಲ್ಲಿ ಈ ದೇಶದಲ್ಲಿ ಭಾರತೀಯರಿಗೆ ಭವಿಷ್ಯವಿಲ್ಲ ಎಂದು ತಿಳಿಸಿದರು.
ಅವಕಾಶವಾದಿಗಳು ಎಲ್ಲ ಕಾಲದಲ್ಲೂ ಇರ್ತಾರೆ ಅವರು ನಮಗೆ ಲೆಕ್ಕಕ್ಕಿಲ್ಲ,ನಮಗೆ ಸಂವಿಧಾನ ಮುಖ್ಯ, ಆರ್ಥಿಕ ಸಮಾನತೆ ಮುಖ್ಯ,ಸಾಮಾಜಿಕ ನ್ಯಾಯ, ದೇಶದ ಜನರ ಸುರಕ್ಷತೆ ಅಭಿವೃದ್ಧಿ ಮುಖ್ಯ, ಈ ಹಿನ್ನೆಲೆಯಲ್ಲಿ ಅಖಂಡವಾಗಿ ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: