ಮೈಸೂರು

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಂಸ್ಕೃತಿಕ ಹಬ್ಬ ‘ವಿದ್ಯುತ್ 2017’  

ವಿದ್ಯಾವರ್ಧಕ ತಾಂತ್ರಿಕ ವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಹಬ್ಬ ‘ವಿದ್ಯುತ್-2017’ ಇದೇ ಏ.15 ರಿಂದ 17ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಡಾ.ಎನ್.ಎಸ್.ಲಿಂಗೇಗೌಡ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿ ಏ.15ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಡಾ.ಗಂಗೂಬಾಯಿ ಹಾನಗಲ್ ವಿವಿಯ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಉಪಸ್ಥಿತರಿರುವರು. ಕಾಲೇಜಿನ ಎನ್‍.ಎಸ್.ಎಸ್ ಘಟಕ, ರೆಡ್ ಕ್ರಾಸ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಎರಡು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ದಾನಿಗಳು ನೀಡಿದ ರಕ್ತವನ್ನು ಜೆ.ಎಸ್.ಎಸ್. ಆಸ್ಪತ್ರೆಗೆ ನೀಡಲಾಗುವುದು ಎಂದರು.

ಏ.16ರಂದು ಬೆಳಿಗ್ಗೆ 6.30ಕ್ಕೆ ‘ರನ್ ಟೂ ಸೇವ್ ಎ ಲೈಪ್’ ಘೋಷವಾಕ್ಯದಡಿ ನಡೆಯುವ  ಮ್ಯಾರಥಾನ್ ಗೆ ನಗರ ಪೊಲೀಸ್ ಆಯುಕ್ತ ಡಾ. ಎ.ಸುಬ್ರಹ್ಮಣ್ಯೇಶ್ವರರಾವ್  ಚಾಲನೆ ನೀಡುವರು. ನೂರು ರೂಪಾಯಿ ಪ್ರವೇಶ ದರವನ್ನು ನಿಗದಿಪಡಿಸಲಾಗಿದ್ದು ಕ್ರೋಢಿಕರಣಗೊಂಡ ಹಣವನ್ನು ಕಾಲೇಜಿನ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗೆ ದೇಣಿಗೆ ನೀಡಲಾಗುವುದು ಎಂದು ತಿಳಿಸಿದರು. 17ರಂದು ಬೆಳಿಗ್ಗೆ 6.30ಕ್ಕೆ ಯೋಗ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಕಾಲೇಜು ಸಾಂಸ್ಕೃತಿಕ ಹಬ್ಬ ವಿದ್ಯುತ್ -2017ರ ಕಾರ್ಯಕ್ರಮ ಸಂಯೋಜಕಿ ಐಶ್ವರ್ಯ ಮಾತನಾಡಿ ಪ್ರತಿ ದಿನ ಸಂಜೆ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಫ್ಯಾಷನ್ ಶೋ, ವಿವಿಧ ಮನೋರಂಜನೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ.ಕೆ.ಎಸ್.ರವಿ, ಕಾಸಿಮ್ ವಾಲೀ ಹಾಗೂ ಇತರರು  ಹಾಜರಿದ್ದರು. (ಕೆ.ಎಂ.ಆರ್-ಎಸ್.ಎಚ್)

 

Leave a Reply

comments

Related Articles

error: