ಮೈಸೂರು

ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಡಾ. ಎಚ್.ವಿ. ನಾಗರಾಜರಾವ್‍ ಅವರಿಗೆ ಶ್ರೀ ನಟರಾಜ ಪ್ರತಿಷ್ಠಾನದಲ್ಲಿ ಸನ್ಮಾನ

ಮೈಸೂರು,ಡಿ.4:- ಶ್ರೀ ನಟರಾಜ ಪ್ರತಿಷ್ಠಾನದಲ್ಲಿ ಪ್ರತಿಭಾ ಸಂಸತ್, ಮೈಸೂರು ಇವರ ಸಂಯೋಗದೊಂದಿಗೆ ಬಹುಭಾಷಾ ವಿದ್ವಾಂಸರೂ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರೂ ಹೆಸರಾಂತ ಸಾಹಿತಿ-ಸಂಶೋಧಕ ಪ್ರತಿಭಾವಂತ ಭಾಷಾಂತರಕಾರರಾದ ವಿದ್ವಾನ್ ಡಾ. ಎಚ್.ವಿ. ನಾಗರಾಜರಾವ್‍ ಅವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ನುಡಿಗಳನ್ನಾಡಿದಂತಹ ಬೆಂಗಳೂರು ಶ್ರೀ ಬೇಲಿಮಠ ಮಹಾಸಂಸ್ಥಾನದ ಶಿವರುದ್ರಸ್ವಾಮಿಗಳು ಮಾತನಾಡಿ ಮಾತೃ ಹೃದಯದ ಗುರುಗಳಿಂದ ತಯಾರಾದವರು ವಿದ್ವಾನ್ ಡಾ. ಎಚ್.ವಿ. ನಾಗರಾಜರಾವ್‍ ಅವರು. ಇವರು ಸದಾ ಅಧ್ಯಯನಶೀಲರು. ಕರುಣೆ, ಉತ್ಸಾಹ, ನಿರ್ಲಿಪ್ತತೆ ಪ್ರತಿಯೊಬ್ಬ ಶಿಷ್ಯನಲ್ಲಿದ್ದಾಗ ಮಾತ್ರ ವಿದ್ಯೆಯು ಸಿದ್ಧಿಸುತ್ತದೆ. ವಿದ್ಯೆ ಕಲಿಯುವುದರಲ್ಲಿ ಅಹಮ್ಮಿಕೆ ಇರದೇ ಅಲ್ಲಿ ವಿನಯವಂತಿಕೆ ಇರಬೇಕು. “ಬಯಸಿ ಬಂದದ್ದು ಅಂಗಭೋಗ, ಬಯಸದೇ ಬಂದದ್ದು ಲಿಂಗ ಭೋಗ” ವೆಂದು ಬಸವಣ್ಣನವರು ತಿಳಿಸಿದ್ದಾರೆಂದು ನುಡಿದರು.

ಪರಿಚಯ ಕೃತಿ ಬಿಡುಗಡೆ ಮಾಡಿದ ಬೆಂಗಳೂರು ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ರು ಮಾತನಾಡಿ “ವಚನಗಳ ಅಧ್ಯಯನ ಮನುಷ್ಯನ ಮನಸ್ಸನ್ನು ಉತ್ತಮ ರೀತಿಯಲ್ಲಿ ಪರಿವರ್ತಿಸುತ್ತದೆ. ವಚನಗಳನ್ನು ಕೇವಲ ಓದಿದರೆ ಸಾಲದು. ಅದರಲ್ಲಿರುವ ಅಂಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕತೆ ಸಿಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರಾದ ಡಾ. ಎಚ್.ವಿ. ನಾಗರಾಜರಾವ್ ನಿರಂತರ ಪ್ರಯತ್ನವಿದ್ದರೆ ಮಾತ್ರ ಯಶಸ್ಸು ಸಾಧ್ಯ. ಮೊದಲ ಪ್ರಯತ್ನದಲ್ಲಿ ಸೋತರು ಎಡಬಿಡದೆ ಮರು ಪ್ರಯತ್ನಿಸುತ್ತಿದ್ದರೆ ಗೆಲುವು ಶತಸಿದ್ಧ”ವೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಭಾ ಸಂಸತ್ ಅಧ್ಯಕ್ಷ ವಿದ್ವಾನ್ ಡಾ. ಎಂ. ಶಿವಕುಮಾರಸ್ವಾಮಿ, ವಹಿಸಿದ್ದರು. ವೇದಿಕೆಯಲ್ಲಿ ಶ್ರೀಹೊಸಮಠ ಅಧ್ಯಕ್ಷ ಚಿದಾನಂದ ಸ್ವಾಮಿಗಳವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು.

ಚೂಡಾಮಣಿಯವರು ಪ್ರಾರ್ಥನೆಯನ್ನು ಮಾಡಿದರೆ, ಡಾ. ಮಮತಾ ರವೀಂದ್ರ ವಚನ ಗಾಯನವನ್ನು ಮಾಡಿದರು. ಡಾ. ಟಿ.ವಿ. ಸತ್ಯನಾರಾಯಣ್ ಎಲ್ಲರನ್ನೂ ಸ್ವಾಗತಿಸಿದರು. ಡಾ. ಜಿ. ಪ್ರಸಾದಮೂರ್ತಿ, ಉಪ ಪ್ರಾಂಶುಪಾಲರು, ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಮೈಸೂರು ನಿರೂಪಿಸಿದರೆ, ಡಾ. ಮಹೇಶ್ ದಳಪತಿ, ಪ್ರಾಂಶುಪಾಲರು, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯ, ಮೈಸೂರು ಇವರು ವಂದಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: