ಕರ್ನಾಟಕಪ್ರಮುಖ ಸುದ್ದಿಮೈಸೂರು

ಮನಮೋಹಕ ಕರಕುಶಲವಸ್ತು ಪ್ರದರ್ಶನಕ್ಕೆ ಚಾಲನೆ

ಇಲ್ಲಿ ಏನುಂಟು..ಏನಿಲ್ಲ..ಮಹಿಳೆಯರು ಇಲ್ಲಿಗೆ ಭೇಟಿ ನೀಡದರಂತೂ ಕೇಳೋದೆ ಬೇಡ, ಅವರ ಜೊತೆಯಲ್ಲಿದ್ದವರು ಅವರನ್ನು ಅಲ್ಲಿಂದ ಹೊರಡಿಸಲು ಹರಸಾಹಸಪಡಬೇಕು ಅಂತಹ ಒಂದು ಆಕರ್ಷಣೆ  ಅಲ್ಲಿದೆ. ಹಾಗಾದರೆ ಅಂತಹದ್ದೇನಿದೆ ಎನ್ನುವ ಪ್ರಶ್ನೆಗೆ ಉತ್ತರ ಬೇಕಿದ್ದಲ್ಲಿ ನೀವಿದನ್ನು ಓದಲೇ ಬೇಕು.

ಮೈಸೂರಿನ ಹೊರವಲಯದಲ್ಲಿರುವ ಅರ್ಬನ್ ಹಾತ್ ನಲ್ಲಿ ದಸರಾ ಉತ್ಸವ ಪ್ರಯುಕ್ತ ಹತ್ತು ದಿನಗಳ ಕಾಲ ಭಾರತ ಸರ್ಕಾರದ ವಸ್ತ್ರ ಮಂತ್ರಾಲಯ ಹಾಗೂ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಸಹಯೋಗದಲ್ಲಿ ಏರ್ಪಡಿಸಲಾದ ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಮೇಳದ ಗಾಂಧಿ ಶಿಲ್ಪ ಬಜಾರ್ ನಲ್ಲಿ ಮನಸೂರೆಗೊಳ್ಳುವಂತಹ ಆಕರ್ಷಕ ವಸ್ತುಗಳಿವೆ. ರಾಜಸ್ಥಾನ್, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಒರಿಸ್ಸಾ, ಛತ್ತೀಸ್ ಗಢ್, ಹೀಗೆ ಅನೇಕ ರಾಜ್ಯಗಳಿಂದ ಆಗಮಿಸಿದ ಕುಶಲಕರ್ಮಿಗಳ 80ಕ್ಕೂ ಹೆಚ್ಚು ಮಳಿಗೆಗಳು ಜನರನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನಾಕರ್ಷಿಸುತ್ತಿದೆ.

ಚಂದೇರಿ, ಪಟೋಲ ಸೀರೆಗಳು, ಚೂಡಿದಾರ್  ಮಟೀರಿಯಲ್ಸ್ ಗಳು, ಅರಗಿನ ಬಳೆಗಳು, ಕಿವಿಯೋಲೆಗಳು, ಬ್ಯಾಗ್ ಗಳು, ಶೃಂಗಾರ ಸಾಮಗ್ರಿಗಳು, ಕಂಚಿನ ವಿಗರಹಗಳು, ರತ್ನಗಂಬಳಿ, ಜಮಖಾನಾ, ಬಿದಿರಿನ ವಸ್ತುಗಳು, ಮರದ ಕೆತ್ತನೆಯ ಶಿಲ್ಪಗಳು, ಶಿಲಾಶಿಲ್ಪಗಳು, ಲೋಹಶಿಲ್ಪಗಳು, ವಿವಿಧ ರೀತಿಯ ದೀವಿಗೆಗಳು, ತಂಜಾವೂರು ಹಾಗೂ ಮೈಸೂರು ಶೈಲಿಯ ಚಿತ್ರಪಟಗಳು, ಸುಂದರ ಪೀಠೋಪಕರಣಗಳು, ಬಿಹಾರದ ಮಧುಬನಿ ಚಿತ್ರಕಲೆ ಸೇರಿದಂತೆ ಹಲವು ಪ್ರಕಾರದ ಕಲಾತ್ಮಕ ಕಲ್ಲಿನ ವಸ್ತುಗಳು ಗಮನ ಸೆಳೆಯುತ್ತಿವೆ.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ವೆಂಕಟೇಶ್  ಪ್ರದರ್ಶನ ಮೇಳವನ್ನು ಉದ್ಘಾಟಿಸಿದರು. ಈ  ಸಂದರ್ಭ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ನಿರ್ದೇಶಕಿ ವರಲಕ್ಷ್ಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹೆಚ್.ರಾಮಕೃಷ್ಣೇ ಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: