
ಮೈಸೂರು
ಗ್ರಾ.ಪಂ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಂಡಿದೆ : ಮಾಜಿ ಸಂಸದ ಧೃವನಾರಾಯಣ್
ಮೈಸೂರು,ಡಿ.5:- ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆದಿದ್ದು, ಸಭೆಯಲ್ಲಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಹೆಚ್.ಪಿ.ಮಂಜುನಾಥ್, ಮಾಜಿ ಸಂಸದ ಧೃವ ನಾರಾಯಣ್, ಧರ್ಮಸೇನ ಸೇರಿದಂತೆ ಹಲವರು ಭಾಗಿಯಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಕಸರತ್ತು ನಡೆಸಿದ್ದಾರೆ.
ಸಭೆಯ ಬಳಿಕ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಧೃವನಾರಾಯಣ್ ಗ್ರಾಮ ಪಂಚಾಯತಿ ಚುನಾವಣೆಯನ್ನು ಕಾಂಗ್ರೆಸ್ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಈ ಹಿಂದೆ ಹೆಚ್ಚು ಪಂಚಾಯತ್ ನಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿದ್ದಾರೆ. ಪಂಚಾಯತ ರಾಜ್ ವ್ಯವಸ್ಥೆಗೆ ಸಾಕಷ್ಟು ಕೊಡುಗೆ ನೀಡಿರೋದು ನಮ್ಮ ಪಕ್ಷ. ಅಧಿಕಾರ ವಿಕೇಂದ್ರೀಕರಣ ವಿಚಾರದಲ್ಲಿ ಪಂಚಾಯತಿಗಳಿಗೆ ಅತಿ ಹೆಚ್ಚು ಅವಕಾಶ ನೀಡಿರುವುದು ಕಾಂಗ್ರೆಸ್. ಪಂಚಾಯತ್ ರಾಜ್ ವ್ಯವಸ್ಥೆ ಯಲ್ಲಿ ಹೆಚ್ಚಿನ ನಂಬಿಕೆ ಇಟ್ಟು ವ್ಯವಸ್ಥೆ ಗೆ ಹೆಚ್ಚು ಅವಕಾಶ ನೀಡಿದೆ. ಸಿದ್ದರಾಮಯ್ಯ ನವರು ಮೊನ್ನೆಯ ಕಾರ್ಯಕರ್ತರ ಸಭೆಯಲ್ಲೂ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ನಮ್ಮಲ್ಲಿ ಈಗಾಗಲೇ ಎಲ್ಲಾ ವಿಭಾಗದಲ್ಲೂ ತಯಾರಿಯಾಗುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದರು. (ಕೆ.ಎಸ್,ಎಸ್.ಎಚ್)