ಕರ್ನಾಟಕಪ್ರಮುಖ ಸುದ್ದಿಮೈಸೂರು

ಪಾಲಕರು ಬೈದಿದ್ದನ್ನು ಸಹಿಸದೆ ಮನೆ ಬಿಟ್ಟು ಬಂದ ಬಾಲಕಿ : ಆಟೋ ಚಾಲಕನ ಸಮಯಪ್ರಜ್ಞೆಯಿಂದ ಸೇರಿದಳು ಬಾಲಮಂದಿರ

ಮೈಸೂರು,ಡಿ.8:- ಇತ್ತೀಚೆಗೆ ಪುಟ್ಟ ಮಕ್ಕಳು ಮನೆಯಲ್ಲಿ ಹಿರಿಯರು ಬೈದಿದ್ದನ್ನು ಸಹಿಸಿಕೊಳ್ಳದ ರೀತಿಯಲ್ಲಿರುತ್ತಾರೆ. ಅದಕ್ಕಾಗಿ ಮನೆ ಬಿಟ್ಟು ಹೋಗುವ ಪ್ರಕರಣಗಳು ಹೆಚ್ಚುತ್ತಲೇ ಇದೆ. ಮನೆಯಲ್ಲಿ ಪೋಷಕರು ಬೈದರು ಎಂಬ ಕಾರಣಕ್ಕಾಗಿ ಹೇಳದೆ ಕೇಳದೆ ಮನೆಬಿಟ್ಟು ಬಂದ 12 ವರ್ಷದ ಬಾಲಕಿಯನ್ನು ಆಟೋ ಚಾಲಕರೊಬ್ಬರು ರಕ್ಷಣೆ ಮಾಡಿ ನಗರದ ಬಾಲಕಿಯರ ಬಾಲಮಂದಿರಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.
ಇತ್ತೀಚೆಗೆ ಬಾಲಕಿಯರು ಮತ್ತು ಬಾಲಕರು ನಾನಾ ಕಾರಣಗಳಿಂದ ಮನೆ ತೊರೆದು ಬಂದು ಪೇಚಿಗೆ ಸಿಲುಕುವ, ಕಿಡಿಗೇಡಿಗಳಿಂದ ದೌರ್ಜನ್ಯಕ್ಕೆ ಒಳಗಾಗುವ ಸಾಕಷ್ಟು ಸುದ್ದಿಗಳು ವರದಿಯಾಗುತ್ತಲೇ ಇವೆ. ಮೈಸೂರಿಗೆ ಬಸ್ಸಿನಲ್ಲಿ ಬಂದಿಳಿದ ಬಾಲಕಿಯ ಮಾತುಗಳನ್ನು ಸೂಕ್ಷ್ಮವಾಗಿ ಆಲಿಸಿದ ಆಟೋ ಚಾಲಕ ಮೈಸೂರಿನ ಶಕ್ತಿ ನಗರದ ಜುಬೇರ್ ಎಂಬವರು ಬಾಲಕಿಯನ್ನು ನೇರವಾಗಿ ಬಾಲಕಿಯರ ಬಾಲ ಮಂದಿರಕ್ಕೆ ಕರೆದೊಯ್ದು ಅಲ್ಲಿನ ಅಧಿಕಾರಿಗಳಿಗೆ ಒಪ್ಪಿಸಿ ಮಾನವೀಯತೆ ಮೆರೆದು ಆದರ್ಶ ಮೆರೆದಿದ್ದಾರೆ.
ಚಾಮರಾಜನಗರ ಮೂಲದ ಈ ಬಾಲಕಿ ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಎಲ್ಲಿಗೆ ಹೋಗಬೇಕು ಎಂದು ತಿಳಿಯದೇ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದಳು. ಇದನ್ನು ಗಮನಿಸಿದ ಜುಬೇರ್ ಬಾಲಕಿಯ ಬಳಿ ಬಂದು ಎಲ್ಲಿಗೆ ಹೋಗಬೇಕೆಂದು ಕೇಳಿದ್ದಾರೆ. ಮೈಸೂರಿನಲ್ಲಿ ನಮ್ಮ ಸಂಬಂಧಿಕರ ಮನೆಯಿದ್ದು, ಅಲ್ಲಿಗೆ ಹೋಗಬೇಕೆಂದು ಬಾಲಕಿ ಉತ್ತರ ನೀಡಿದ್ದಾಳೆ. ಇದೇ ವೇಳೆ ಜುಬೇರ್ ಸಂಬಂಧಿಕರ ಮನೆಯ ವಿಳಾಸ ನೀಡುವಂತೆ ಕೇಳಿದ್ದು, ಆಗ ಬಾಲಕಿ ‘ನನಗೆ ಗೊತ್ತಿಲ್ಲ, ಅವರ ಮನೆಯವರ ಮೊಬೈಲ್ ನಂಬರ್ ಕೂಡ ನನ್ನ ಬಳಿ ಇಲ್ಲ ಎಂದು ಉತ್ತರಿಸಿದ್ದು, ತಕ್ಷಣ ಜಾಗೃತನಾದ ಆಟೋ ಚಾಲಕ ಬಾಲಕಿಯನ್ನು ನೇರವಾಗಿ ಶಕ್ತಿಧಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಇಲ್ಲಿ ಮಕ್ಕಳಿಗೆ ಅವಕಾಶವಿಲ್ಲ ಎಂದು ಹೇಳಿದ ಅಲ್ಲಿನ ಸಿಬ್ಬಂದಿ ಬಾಲಕಿಯರ ಬಾಲ ಮಂದಿರಕ್ಕೆ ಬಿಡುವಂತೆ ಸಲಹೆ ನೀಡಿದ್ದು, ಜುಬೇರ್ ನೇರವಾಗಿ ಆ ಬಾಲಕಿಯನ್ನು ಬಾಲಮಂದಿರಕ್ಕೆ ಕರೆ ತಂದು ಬಿಟ್ಟಿದ್ದಾರೆ.
ಅಲ್ಲಿ ಬಾಲಕಿಯನ್ನು ಅವರು ಆತ್ಮೀಯವಾಗಿ ಅಕ್ಕರೆಯಿಂದ ವಿಚಾರಿಸಲು ನೀನು ಸರಿಯಾಗಿ ಓದುವುದಿಲ್ಲ ಎಂದು ಪಾಲಕರು ಪದೇ ಪದೆ ಬೈಯುತ್ತಿದ್ದರು. ಇಂಜಿನಿಯರಿಂಗ್ ಓದುತ್ತಿರುವ ತನ್ನ ಅಕ್ಕನಿಗೆ ಹೋಲಿಕೆ ಮಾಡಿ ಜರಿಯುವುದು ಮಾಡುತ್ತಿದ್ದರು ಎಂದು ಬಾಲಕಿ ಬಾಯ್ಬಿಟ್ಟಿದ್ದಾಳೆ. ಇದೇ ಬಾಲಕಿಯ ಮನಸ್ಸನ್ನು ಹೆಚ್ಚು ಘಾಸಿ ಮಾಡಿದ್ದು, ತಾನು ಕೂಡಿಟ್ಟುಕೊಂಡಿದ್ದ ಹಣವನ್ನು ಬಳಸಿಕೊಂಡು ಬಾಲಕಿ ಮೈಸೂರು ಬಸ್ ಹತ್ತಿ ಬಂದಿದ್ದಾಳೆ ಎನ್ನಲಾಗಿದೆ. ಇದೀಗ ಬಾಲಕಿ ಬಾಲಮಂದಿರದಲ್ಲಿ ಸುರಕ್ಷಿತವಾಗಿದ್ದಾಳೆ.
ಪಾಲಕರಿಗೆ ಕಿವಿಮಾತು
ಪಾಲಕರು ಇನ್ನೊಂದು ಮಕ್ಕಳಿಗೆ ತಮ್ಮ ಮಕ್ಕಳನ್ನು ಹೋಲಿಸುವುದು ಸರಿಯಲ್ಲ. ಅವರವರ ಪ್ರತಿಭೆ ಅವರದ್ದು, ಹೇಗೆ ಕೈಯ್ಯಲ್ಲಿರುವ ಐದು ಬೆರಳುಗಳು ಒಂದೇ ತರ ಇರಲಾರದೋ ಅದೇ ತರ ಎಲ್ಲರೂ ಒಂದೇ ರೀತಿ ಇರಲ್ಲ. ಇದನ್ನು ಪೋಷಕರು ಮೊದಲು ಅರಿತುಕೊಳ್ಳಬೇಕು. ಮಕ್ಕಳಿಗೆ ಯಾವುದೇ ಕಾರಣಕ್ಕೂ ಘಾಸಿ ಮಾಡಬಾರದು. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ನಿಂದನೆ, ಅಪಹಾಸ್ಯ, ಕಡೆಗಣನೆ ಸಹಿಸಲ್ಲ, ಪಾಲಕರ ಪ್ರೀತಿ ಎಲ್ಲರಿಗೂ ಸಮನಾಗಿರಬೇಕು ಎಂದು ಬಯಸುತ್ತಾರೆ. ಕೆಲವು ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋದರೆ, ಇನ್ನು ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಇವರು ಯಾರೂ ಬೇಡ ಎಂದೇ ತೀರ್ಮಾನಿಸುವ ಮಕ್ಕಳು ಮನೆಯನ್ನೇ ತೊರೆದು ಬಿಡುತ್ತಾರೆ. ಹೀಗೆ ಮನೆ ಬಿಟ್ಟು ಬಂದ ಮಕ್ಕಳು ನಾನಾ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇನ್ನಾದರೂ ಮಕ್ಕಳನ್ನು ಗದರುವ ಮುನ್ನ ಪಾಲಕರೇ ನೀವು ಹುಶಾರಾಗಿರಿ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: