ನಮ್ಮೂರುಮೈಸೂರು

ಜನರಿಗೆ ಸಾಲ ಸೌಲಭ್ಯ ವಿತರಣೆಯಲ್ಲಿ ವಿಳಂಬ ಬೇಡ: ಪ್ರತಾಪ್ ಸಿಂಹ

ಸರಕಾರ ಜನರಿಗೆ ರೂಪಿಸಿರುವ ಸಾಲ ಯೋಜನೆಗಳನ್ನು ಜನರಿಗೆ ತಲುಪಿಸಲು ಎಲ್ಲ ಬ್ಯಾಂಕ್‍ಗಳು ಆಸಕ್ತಿ ವಹಿಸಬೇಕೆಂದು ಸಂಸದರಾದ ಪ್ರತಾಪ್ ಸಿಂಹ ಮತ್ತು ಧ್ರುವನಾರಾಯಣ್ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಮೈಸೂರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಮೈಸೂರು ಜಿಲ್ಲೆಯ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸಾಲ ಸೌಲಭ್ಯಗಳನ್ನು ವಿತರಿಸುವಲ್ಲಿ ಖಾಸಗಿ ಬ್ಯಾಂಕ್‍ಗಳು ನಿರ್ಲಕ್ಷ್ಯ ಧೋರಣೆ ವಹಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಇದನ್ನು ಸರಿಪಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ 106 ಗ್ರಾಪಂಗಳಿದ್ದು, 92 ಗ್ರಾಪಂಗಳಲ್ಲಿ ಮಾತ್ರ ಬ್ಯಾಂಕ್‍ಗಳಿವೆ. ಇದರಲ್ಲೂ ಕೆಲ ಬ್ಯಾಂಕ್‍ಗಳಲ್ಲಿ ಎಟಿಎಂ ಸೌಲಭ್ಯವಿಲ್ಲ. ಎಲ್ಲ ಗ್ರಾಪಂಗಳಲ್ಲೂ ಬ್ಯಾಂಕ್ ಶಾಖೆಗಳನ್ನು ತೆರೆಯಬೇಕು. ವಿದ್ಯಾರ್ಥಿವೇತನ ಪಡೆಯುವ ಉದ್ದೇಶಕ್ಕೆ ಖಾತೆ ತೆರೆಯುವ ವಿದ್ಯಾರ್ಥಿಗಳಿಗೆ ಉತ್ತಮ ಸಹಕರಿಸಿ ಎಂದು ಹೇಳಿದರು.

ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ಖಾಸಗಿ ಬ್ಯಾಂಕ್‍ನವರು ಸಾಲ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಬೇಕು. ಪ್ರಧಾನಮಂತ್ರಿಗಳ ಮುದ್ರಾ ಸಾಲ ಯೋಜನೆಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿದೆ. ಕೆನರಾ ಬ್ಯಾಂಕ್, ಸ್ಟೇಟ್‍ ಬ್ಯಾಂಕ್ ಸೇರಿದಂತೆ ಕೆಲ ಬ್ಯಾಂಕ್‍ಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಮುದ್ರಾ ಯೋಜನೆಯಲ್ಲಿ ಜಿಲ್ಲೆಯಲ್ಲಿ ಈವರೆಗೆ 242 ಕೋಟಿ ರು. ಸಾಲ ನೀಡಲಾಗಿದ್ದು, 17,806 ಮಂದಿ ಫಲಾನುಭವಿಗಳಾಗಿದ್ದಾರೆ. ಇನ್ನಷ್ಟು ಮಂದಿಗೆ ಸಾಲ ಸೌಲಭ್ಯ ಒದಗಿಸುವ ಅಗತ್ಯವಿದೆ ಎಂದರು.

ಮಾರ್ಗದರ್ಶಿ ಬ್ಯಾಂಕ್‍ನ ಪ್ರಬಂಧಕ ಶಿವಲಿಂಗಯ್ಯ ಮಾತನಾಡಿ, ಕೋಟಕ್‍ ಮಹೀಂದ್ರ ಬ್ಯಾಂಕ್‍ ವಿರುದ್ಧ ಹೆಚ್ಚು ದೂರುಗಳು ಕೇಳಿಬಂದಿವೆ. ಸರಕಾರಿ ಸಾಲ ಯೋಜನೆಗೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್‍ಗಳು ಸಾಲ ನೀಡಲೇಬೇಕೆಂಬ ನಿಯಮವೇನೂ ಇಲ್ಲ ಎಂದು ವಾದಿಸಿದ್ದರು. ಜನರ ಅಭ್ಯುದಯಕ್ಕಾಗಿ ಕೆಲಸ ಮಾಡುವಂತೆ ಅವರಿಗೆ ತಿಳಿಸಲಾಗಿದೆ ಎಂದರು.

ಕನ್ನಡ ಕಲಿಸಿ: ಕರ್ನಾಟಕದಲ್ಲಿ ಕೆಲಸ ಮಾಡುವ ಬೇರೆ ರಾಜ್ಯದ ಜನರು ಕನ್ನಡ ಕಲಿಯಬೇಕಾದ ಅನಿವಾರ್ಯತೆಯಿದೆ. ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕ್‍ ಸಿಬ್ಬಂದಿ ಹಿಂದಿ, ಇಂಗ್ಲಿಷ್‍ನಲ್ಲಿ ಸಂವಹನ ನಡೆಸುತ್ತಾರೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಜನಕ್ಕೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಹಾಗಾಗಿ ಅವರು ಬ್ಯಾಂಕ್‍ ವ್ಯವಹಾರ ಮಾಡುವುದನ್ನೇ ನಿಲ್ಲಿಸುತ್ತಾರೆ. ಬೇರೆ ರಾಜ್ಯಗಳಿಂದ ಬಂದ ಬ್ಯಾಂಕ್‍ ಸಿಬ್ಬಂದಿಗೆ ಕನ್ನಡ ಕಲಿಸುವ ಅಗತ್ಯವಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿ ಸುಜಾತ ವೆಂಕಟೇಶ್, ನಬಾರ್ಡ್ ವ್ಯವಸ್ಥಾಪಕ ಅರುಣ್ ಮದನ್ ಇದ್ದರು.

 

Leave a Reply

comments

Related Articles

error: