ಮೈಸೂರು

ಶ್ರೀ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ 7ನೇ ಪುಣ್ಯಸ್ಮರಣೆ

ಮೈಸೂರು,ಡಿ.10-ಶ್ರೀ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ 7ನೇ ವರ್ಷದ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಇಂದು ಮನುವನದಲ್ಲಿ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.

ಮೈಸೂರು ಅರಮನೆ ಆಡಳಿತ ಮಂಡಳಿ ವತಿಯಿಂದ ಒಡೆಯರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಅವರನ್ನು ಸ್ಮರಿಸಲಾಯಿತು.

ಬಳಿಕ ಮಾತನಾಡಿದ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಮೈಸೂರು ಹಾಗೂ ಅರಮನೆ ವಿಷಯದಲ್ಲಿ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.

ಅರಮನೆಗೆ ಪ್ರವಾಸಿಗರೇ ಮುಖ್ಯ ಆಕರ್ಷಣೆ. ಕೋವಿಡ್ ನಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಕೋವಿಡ್ ಗೂ ಮೊದಲು ಪ್ರತಿ ವರ್ಷ 30-35 ಲಕ್ಷ ಮಂದಿ ಪ್ರವಾಸಿಗರು ಬರುತ್ತಿದ್ದರು. ಸೋಮವಾರದಿಂದ ಶುಕ್ರವಾರದವರೆಗೆ 6-8 ಸಾವಿರ ಪ್ರವಾಸಿಗರು ಬರುತ್ತಿದ್ದರು. ಶನಿವಾರದಿಂದ ಭಾನುವಾರದವರೆಗೆ 12 ಸಾವಿರ ಇರುತ್ತಾ ಇತ್ತು. ಡಿಸೆಂಬರ್ ಕೊನೆ ವಾರದಲ್ಲಿ ದಸರಾಗಿಂತ ಹೆಚ್ಚು ಮಂದಿ ಬರುತ್ತಿದ್ದರು. 25-30 ಸಾವಿರ ಪ್ರವಾಸಿಗರು ಬರುತ್ತಿದ್ದರು. ಕೋವಿಡ್ ನಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಆದರೂ ಮೊದಲಿಗಿಂತ ಚೇತರಿಸಿಕೊಂಡಿದೆ. ಈಗ ಪ್ರತಿನಿತ್ಯ 3 ಸಾವಿರ ಮಂದಿ ಬರುತ್ತಾ ಇದ್ದಾರೆ. ಬಹುಶಃ ಡಿಸೆಂಬರ್ ಕೊನೆ ವಾರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು ಎಂದು ಭಾವಿಸಿದ್ದೇನೆ. ಅರಮನೆ ಆಡಳಿತ ಮಂಡಳಿಯಿಂದ ಕೋವಿಡ್ ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಮಾಗಿ ಉತ್ಸವ ಇಲ್ಲ: ಈ ಬಾರಿ ಕೋವಿಡ್ 19 ಇರುವುದರಿಂದ ಮಾಗಿ ಉತ್ಸವ ಮಾಡುತ್ತಿಲ್ಲ. ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಮಾಗಿ ಉತ್ಸವದಲ್ಲಿ ಆಯೋಜಿಸುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ಯುಗಾದಿ ಸಂಗಿತೋತ್ಸವದಲ್ಲಿ ಮಾಡುವ ಆಲೋಚನೆಯಲ್ಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರಾಘವೇಂದ್ರ, ಧರ್ಮಪಾಲ, ಪರಮೇಶ್, ಬಾಲಾಜಿ ಜಿಟ್ಟಿ ಗಂಗಾಧರ ಸ್ವಾಮಿ, ವರದರಾಜು ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: