ಮೈಸೂರು

ಕವಿಗೆ ಜೀವನಾನುಭವ -ಅಭಿವ್ಯಕ್ತಿಸುವ ಸಾಮರ್ಥ್ಯಬೇಕು : ಡಾ.ರಾಮೇಗೌಡ

ಕವಿಗಳಿಗೆ ಜೀವನಾನುಭವ ಹಾಗೂ ಅಭಿವ್ಯಕ್ತಿಸುವ ಸಾಮರ್ಥ್ಯವಿರಬೇಕು ಎಂದು ಹಿರಿಯ ವಿದ್ವಾಂಸ ಡಾ.ರಾಮೇಗೌಡ ಅಭಿಪ್ರಾಯಪಟ್ಟರು.

ಗುರುವಾರ, ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದಿಂದ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಾವ್ಯ ಪರಿಕಲ್ಪನೆ ಹಾಗೂ ಅನುಸಂಧಾನ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿ ಬದುಕಿಲ್ಲದೇ ಕಾವ್ಯವಿಲ್ಲ, ಕಲ್ಪನೆಯಿಲ್ಲದ ಬದುಕಿಲ್ಲ ಇವೆರಡರ ನಡುವೆ ಹುಟ್ಟುವುದೇ ಕವಿತೆ. ಕವಿತೆ ಬರೆಯುವುದು ಸುಲಭ ಎನ್ನುವುದು ಇತ್ತೀಚಿನ ಅಭಿಪ್ರಾಯವಾಗಿದ್ದು ಕವಿತೆ ಸೃಷ್ಠಿಗೆ ಅಂತರ ದೃಷ್ಟಿಯ ಜ್ಞಾನ ಬೇಕು, ಅಧಮ್ಯ ಸೃಜನಶೀಲ ಮನಸ್ಸು ಕವಿಗೆ ಬೇಕು. ಗದ್ಯದ ಸಾಲುಗಳನ್ನು ತುಂಡು ತುಂಡಾಗಿ ಕತ್ತರಿಸಿ  ಕವನವಾಗಿಸಬೇಕು ಎನ್ನುವ ಚಿಂತನೆಯಲ್ಲಿರುವ ಹಲವು ಕವಿಗಳಿದ್ದಾರೆ. ಇಂದು ಮನೆ ಮನೆಗಳಲ್ಲಿ ಕವಿಗೋಷ್ಠಿಗಳು ನಡೆಯುತ್ತಿದ್ದು ಹಲವಾರು ಕವಿಗಳು ಹುಟ್ಟಿದ್ದಾರೆಯಾದರೂ, ಉಳಿಯುವುದು ಅತಿ ಮುಖ್ಯವೆಂದರು. ಕವಿತೆಯ ತಪ್ಪು ಸರಿ ತಿದ್ದಬಹುದೇ ವಿನಃ ಕವನ ಬರೆಯುವುದು ಹೇಗೆ ಎನ್ನುವ ತರಬೇತಿ ಇಲ್ಲ, ನೀಡಲು ಸಾಧ್ಯವಿಲ್ಲ, ಕವನ ರಚನೆ ಸೃಜನಶೀಲತೆ ಎನ್ನುವುದು ಕವಿಯ ಅಂತರ್‍ ಮನಸ್ಸಿನಿಂದ ಬರಬೇಕು, ರಾಷ್ಟ್ರಕವಿ ಕುವೆಂಪು ಇಂಗ್ಲಿಷ್‍ ಮೂಲದಿಂದ ಕನ್ನಡಕ್ಕೆ ಬಂದವರು. ಕವಿತೆ ಎಂದರೇ ಇಂಗ್ಲಿಷ್‍ ಎನ್ನುವ ಮನಸ್ಥಿತಿ ಹೊಂದಿದ್ದರು ಎನ್ನುವುದೇ ಸೋಜಿಗ ಎಂದ ಅವರು, ಬೆಳಕಿಗೆ ಬಾರದ ಎಷ್ಟೋ ಜಾನಪದ ಕಾವ್ಯಗಳಿವೆ. ಈಗ ಉಳಿದಿರುವುದು ಕೆಲವು ಮಾತ್ರ.  ವಿದ್ಯಾರ್ಥಿಗಳಿಗೆ ಕಾವ್ಯಸ್ವಾದ, ಅನುಸಂಧಾನ, ಗ್ರಹಿಸುವ ಸೂಕ್ಷ್ಮತೆ ಬಹು ಮುಖ್ಯವಾಗಿದೆ. ಸದಾ ಅಧ್ಯಯನಶೀಲರಾಗಿ ಪ್ರಬುದ್ಧ ಚಿಂತನೆಗಳ ಮೂಲಕ ಕವನ ರಚಿಸಬೇಕೆಂದು ಕರೆ ನೀಡಿದರು.

ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್.ಲೋಕಪ್ಪ, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಟಿ.ವಿಜಯ್, ಉಪನ್ಯಾಸಕ ಡಾ.ಬಿ.ವಿ.ವಸಂತ ಕುಮಾರ್, ಪ್ರೊ.ರೇಣು ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: