ದೇಶಪ್ರಮುಖ ಸುದ್ದಿ

ಒಕ್ಕಲಿಗ ಸಂಘದ ದಂತವೈದ್ಯ ಕಾಲೇಜಿನ ಒಟ್ಟು 40 ವಿದ್ಯಾರ್ಥಿಗಳು ಅನರ್ಹ

ಬೆಂಗಳೂರು : ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಮತ್ತೆ ಒಕ್ಕಲಿಗ ಸಂಘ ಡೆಂಟಲ್ ಕಾಲೇಜಿನ 20 ವಿದ್ಯಾರ್ಥಿಗಳನ್ನು ಅನರ್ಹಗೊಳಿಸಿದೆ.

ಇದರೊಂದಿಗೆ ಪರೀಕ್ಷೆ ಬರೆಯಲು ಅನರ್ಹರಾದ ವಿದ್ಯಾರ್ಥಿಗಳ ಸಂಖ್ಯೆ 40ಕ್ಕೇರಿದೆ. ಸುಮಾರು 20 ವಿದೇಶಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನರ್ಹರು ಎಂದು ಘೋಷಿಸಲಾಗಿದ್ದು, ಕಾಲೇಜಿನ ಪ್ರವೇಶಾತಿ ಮಿತಿಗಿಂತ ಹೆಚ್ಚು 40 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ವಿದ್ಯಾರ್ಥಿಗಳನ್ನು ತೆಗೆದುಹಾಕುವಂತೆ ವಿಶ್ವವಿದ್ಯಾಲಯವು ಕಾಲೇಜಿಗೆ ಮೊದಲೇ ಸೂಚನೆ ನೀಡಿತ್ತು. ಕಳೆದ ವರ್ಷ ಮೇ ತಿಂಗಳಿನಲ್ಲಿಯೇ ಸೂಚನೆ ನೀಡಿದ್ದರೂ ಆಡಳಿತ ಮಂಡಳಿ ಇದನ್ನು ನಿರ್ಲಕ್ಷಿಸಿತ್ತು.

ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಲೇಜು ಆಡಳಿತ ಮಂಡಳಿ ನಮ್ಮನ್ನು ಸಂಪರ್ಕಿಸಿದೆ. ಅಕ್ರಮ ಪ್ರವೇಶಾತಿಯಾದ್ದರಿಂದ ಸರ್ಕಾರ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ನಮ್ಮನ್ನು ಸಂಪರ್ಕಿಸಿದರೆ ಅವರು ಪಾವತಿಸಿದ ಶುಲ್ಕವನ್ನು ಹಿಂತಿರುಗಿಸುವಂತೆ ಒತ್ತಾಯಿಸಬಹುದು ಎಂದು ಹೇಳಿದ್ದಾರೆ. ಇನ್ನು ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಒಕ್ಕಲಿಗ ಸಂಘ ಇದೇ ಶನಿವಾರ ಸಭೆ ಕರೆದಿದ್ದು ಸಮಸ್ಯೆಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

(ಎನ್‍.ಬಿ.ಎನ್‍)

Leave a Reply

comments

Related Articles

error: