ದೇಶಪ್ರಮುಖ ಸುದ್ದಿ

ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಪ್ರಸ್ತಾಪಗಳನ್ನು ಪರಿಗಣಿಸಬೇಕು : ಸಚಿವ ನರೇಂದ್ರ ಸಿಂಗ್ ತೋಮರ್

ದೇಶ( ನವದೆಹಲಿ)ಡಿ.11:- ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೊಸ ಕೃಷಿ ಕಾನೂನು ವಿರೋಧಿ ಪ್ರತಿಭಟನೆ ನಡೆಸುತ್ತಿರುವ ರೈತ ನಾಯಕರ ಜತೆಗೆ ಮಾತುಕತೆಯ ಪ್ರಸ್ತಾಪವನ್ನು ಇಟ್ಟಿದ್ದು ​, ನಾವು ಕಳುಹಿಸಿರುವ ಪ್ರಸ್ತಾವನೆಯನ್ನು ಒಮ್ಮೆ ಓದಿಕೊಳ್ಳಿ. ನಂತರ ಮಾತುಕತೆ ನಡೆಸೋಣ ಎಂದು ಕರೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಪ್ರಸ್ತಾಪಗಳನ್ನು ಪರಿಗಣಿಸಬೇಕು. ಪ್ರತಿಭಟನಾನಿರತರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಮುಕ್ತವಾಗಿ ಮಾತುಕತೆ ನಡೆಸುವುದಕ್ಕೆ ಸರ್ಕಾರ ಸಿದ್ಧವಿದೆ. ಕಾನೂನಿನ ಯಾವೆಲ್ಲ ಅಂಶಗಳ ಬಗ್ಗೆ ಅವರ ವಿರೋಧ ಇದೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಎಪಿಎಂಸಿ ಅಥವಾ ಎಂಎಸ್​ ಪಿಗಳ ಮೇಲೆ ಕಾನೂನು ಯಾವ ರೀತಿಯ ಕೆಟ್ಟ ಪರಿಣಾಮವನ್ನೂ ಬೀರದು. ಇದನ್ನು ನಾವು ಅವರಿಗೆ ತಿಳಿಸಿ ಹೇಳುವುದಕ್ಕೆ ಪ್ರಯತ್ನಿಸಿದ್ದೇವೆ.

ಗುತ್ತಿಗೆ ಕೃಷಿ ಪದ್ಧತಿ ಬಂದರೆ ಕೃಷಿ ಭೂಮಿ ಉದ್ಯಮಿಗಳ ಪಾಲಾಗಲಿದೆ ಎಂದು ಗುಜರಾತ್​, ಮಹಾರಾಷ್ಟ್ರ, ಪಂಜಾಬ್​, ಹರಿಯಾಣ, ಕರ್ನಾಟಕಗಳಲ್ಲಿ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಅಂಥ ಯಾವುದೇ ಅನುಭವ ಆಗಿಲ್ಲ ಎಂದು ವಿವರಿಸಿದ್ದಾರೆ.
ಕೃಷಿ ಕಾನೂನು ತಿದ್ದುಪಡಿ ಕುರಿತು ಕೇಂದ್ರ ಸರ್ಕಾರ ನೀಡಿದ ಕರಡು ಪ್ರಸ್ತಾವನೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿದ ಒಂದು ದಿನದ ನಂತರ, ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮತ್ತು ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳಲ್ಲಿನ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ತರುವ ಬಗ್ಗೆ ರೈತರಿಗೆ ಲಿಖಿತ ಭರವಸೆ ನೀಡಲಾಗಿದೆ ಎಂದರು.
ಮಾತುಕತೆ ನಡೆಯುತ್ತಿರುವಾಗ ಮುಂದಿನ ಹಂತದ ಪ್ರತಿಭಟನೆ ಘೋಷಿಸುವುದು ಸರಿಯಲ್ಲ. ರೈತರು ಕೃಷಿ ಕಾನೂನುಗಳ ಕುರಿತು ಚರ್ಚೆಗೆ ಮರಳುವಂತೆ ಸಚಿವರು ಒತ್ತಾಯಿಸಿದ್ದಾರೆ.

ನಾವು ಪ್ರತಿಭಟನಾನಿರತ ರೈತರೊಂದಿಗೆ ಚರ್ಚಿಸಿದ ನಂತರವೇ ಪ್ರಸ್ತಾವನೆ ನೀಡಿದ್ದೇವೆ. ಆದ್ದರಿಂದ ಅದನ್ನು ರೈತ ಸಂಘಟನೆಗಳು ಪರಿಗಣಿಸಬೇಕು. ಈ ಪ್ರಸ್ತಾವನೆ ಬಗ್ಗೆ ಮತ್ತಷ್ಟು ಚರ್ಚಿಸಲು ಬಯಸಿದರೆ, ಅದಕ್ಕೂ ನಾವು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ. (ಏಜೆನ್ಸೀಸ್, ಎಸ್.ಎಚ್)

Leave a Reply

comments

Related Articles

error: