ಕರ್ನಾಟಕಪ್ರಮುಖ ಸುದ್ದಿಮೈಸೂರು

ನಮ್ಮದು ರೈತಪರ ಸರ್ಕಾರ, ಕಾಯ್ದೆಯೂ ರೈತಪರ ನನ್ನ ಬೆಳೆ, ನನ್ನ ಹಕ್ಕು ರೈತರ ಘೋಷವಾಕ್ಯ ನನ್ನ ಬೆಳೆ, ನನ್ನ ಬೆಲೆ ಇದು ರೈತರ ಅಧಿಕಾರ : ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ

ಮೈಸೂರು/ಬೆಂಗಳೂರು,ಡಿ.11:- ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಮ್ಮದು ರೈತಪರ ಸರ್ಕಾರ. ನಾವು ಯಾವುದೇ ತೀಮಾನ ತೆಗೆದುಕೊಂಡರೂ ಅದರಲ್ಲಿ ರೈತರ ಹಿತ ಅಡಗಿರುತ್ತದೆ. ಇದರಲ್ಲಿ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಮತ್ತು ಕೇಂದ್ರ ಸರ್ಕಾರ ಎಪಿಎಂಸಿಗೆ ಸಂಬಂಧಿಸಿದಂತೆ ನೂತನವಾಗಿ ಜಾರಿಗೆ ತಂದಿರುವ ಕಾಯ್ದೆಗಳು ಸಹ ಹೊರತಾಗಿಲ್ಲ. ಈ ಕಾಯ್ದೆಗಳು ರೈತರ ಹಿತವನ್ನು ಕಾಪಾಡುವುದಲ್ಲದೆ, ಅವರ ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತದೆ. ನನ್ನ ಬೆಳೆ, ನನ್ನ ಹಕ್ಕುಎಂದು ನಮ್ಮ ಅನ್ನದಾತ ಹೆಮ್ಮೆಯಿಂದ ಹೇಳಿಕೊಳ್ಳಲು ಸಹಕಾರಿಯಾಗಿದೆ. ಇದನ್ನು ಮುಂದುವರೆಸಿದಲ್ಲಿ ನನ್ನ ಬೆಳೆ, ನನ್ನ ಬೆಲೆಎಂಬ ಅಧಿಕಾರ ಸಹ ರೈತನಿಗೆ ಬರಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು ಈ ಹಿಂದಿನಿಂದಲೂ ರೈತ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿದ್ದಾನೆ. ಮಳೆ ಬರಲಿ, ಬಾರದಿರಲಿ ಉತ್ಪಾದನೆ ಹೆಚ್ಚಿರಲಿ, ಕಡಿಮೆ ಇರಲಿ ಹೊಲದಲ್ಲಿ ಕಷ್ಟಪಟ್ಟು ಉತ್ತಿಬಿತ್ತಿದ ಬೆಳೆಗೆ ನೈಜ ಬೆಲೆ ಸಿಗುತ್ತಲೇ ಇಲ್ಲ ಎಂಬ ಕೊರಗು ನಮ್ಮ ಅನ್ನದಾತರನ್ನು ಕಾಡುತ್ತಲೇ ಇದೆ. ಇದಕ್ಕೆ ಬಹುಮುಖ್ಯವಾದ ಕಾರಣ, ನಮ್ಮ ವ್ಯವಸ್ಥೆಯಲ್ಲಿರುವ ಲೋಪ ಎಂದೇ ಹೇಳಬಹುದು. ಕಷ್ಟಪಟ್ಟು ಬೆಳೆಯುವ ರೈತ, ಬೆಳೆಗಳನ್ನು ಕೊಯ್ದು, ಸಂಸ್ಕರಿಸಿ, ಚೀಲಕ್ಕೆ ತುಂಬಿ, ವಾಹನಗಳಲ್ಲಿ ಅವುಗಳನ್ನು ಹೇರಿಕೊಂಡು ಎಪಿಎಂಸಿ ಗಳಿಗೆ ಬಂದರೆ, ಆತನಿಗೆ ಧಕ್ಕುವುದು ಏನು..? ಈ ಪ್ರಶ್ನೆಯನ್ನು ರೈತ ಒಬ್ಬನೇ ಏಕೆ? ಸಮಾಜದ ಪ್ರತಿಯೊಬ್ಬರು ಹಾಕಿಕೊಳ್ಳಬೇಕಿದೆ. ಇದು ನಮ್ಮ ಕರ್ತವ್ಯ ಕೂಡಾ. ರೈತನ ಬಳಿ ಭಾರೀ ಕಡಿಮೆ ದರಕ್ಕೆ ಖರೀದಿ ಮಾಡುವ ದಲ್ಲಾಳಿ/ವ್ಯಾಪಾರಿ ಆತನ ಕಣ್ಣ ಮುಂದೆಯೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಾನೆ.

ಹಾಗಾದರೆ, ಇದು ವ್ಯವಸ್ಥೆಯಲ್ಲಿನ ಲೋಪವಲ್ಲದೆ ಮತ್ತಿನ್ನೇನು ಎಂದು ನಾನು ಈ ಸಂದರ್ಭದಲ್ಲಿ ಬಹಿರಂಗವಾಗಿ ಕೇಳಲು ಇಚ್ಚಿಸುತ್ತೇನೆ. ಗ್ರಾಹಕ ಉಪಯೋಗಿ ಉತ್ಪನ್ನಗಳನ್ನು ಮಾರುವ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಎಂ.ಆರ್.ಪಿ (Maximum Retail Price) ಯನ್ನು ನಿಗದಿ ಮಾಡಿಕೊಳ್ಳಲು ನಾವು ಅವಕಾಶವನ್ನು ಕೊಡುತ್ತೇವೆ. ಅದೇ ನಾಡಿನ ಜನತೆಯ ಹೊಟ್ಟೆಗೆ ಅನ್ನ ಹಾಕುವ ಅನ್ನದಾತನಿಗೆ ಆ ಹಕ್ಕನ್ನು ಕೊಡವುದಿಲ್ಲವೇ…? ಇದೆಂಥಾ ನ್ಯಾಯ ಎಂದು ಇದರ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ನಾಯಕರುಗಳನ್ನು ಕೇಳಲು ಇಚ್ಛೆ ಪಡುತ್ತೇನೆ ಎಂದರು.

ಒಂದು ಬಹುರಾಷ್ಟ್ರೀಯ ಕಂಪನಿಯು (Multi National Company) ತನ್ನ ಉತ್ಪನ್ನಕ್ಕೆ ದರ ನಿಗದಿಪಡಿಸಿಕೊಂಡು ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿರ್ಧರಿಸುವ ಹಕ್ಕು ರೈತನದ್ದಾಗಬೇಕು. ರೈತ ಸ್ವತಂತ್ರ ಜೀವಿಯಾಗಬೇಕು. ನನ್ನ ಬೆಳೆ, ನನ್ನ ಹಕ್ಕುಎಂಬ ಘೋಷ ವಾಕ್ಯ ಪ್ರತಿಯೊಬ್ಬ ರೈತನದ್ದಾಗಿರಬೇಕು.

ಕೇಂದ್ರ ಸರ್ಕಾರದ The State/UT Agricultural Produce and Livestock Marketing (Promotion and Facilitation) Act, 2017 ಮಾದರಿ ಕಾಯ್ದೆಯ ಶಿಫಾರಸ್ಸುಗಳನ್ವಯ ರಾಜ್ಯದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದರನ್ವಯ ಕಲಂ 8(2) ಮತ್ತು ಕಲಂ 117ಕ್ಕೆ ತಿದ್ದುಪಡಿ ಮಾಡಲಾಗಿದೆ. ಕಲಂ 8(3) ನ್ನು ಕೈಬಿಡಲಾಗಿದೆ.

ಕಲಂ 8(2) ರಡಿ ಇದುವರೆಗೆ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದಲ್ಲೇ ಮಾರಾಟ ಮಾಡಬೇಕೆಂಬ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಎಪಿಎಂಸಿ ಸಮಿತಿಯ ನಿಯಂತ್ರಣವನ್ನು ಪ್ರಾಂಗಣಕ್ಕೆ ಸೀಮಿತಗೊಳಿಸಿದೆ. ಕಲಂ 8(2)ರ ಉಲ್ಲಂಘನೆಗೆ ದಂಡ ಮತ್ತು ಸಜೆ ಶಿಕ್ಷೆಯನ್ನು ವಿಧಿಸುತ್ತಿದ್ದ ಕಲಂ 117 ಕೈಬಿಡಲಾಗಿದೆ. ಈ ತಿದ್ದುಪಡಿಯಿಂದ ರೈತ ತಾನು ಬೆಳೆದ ಬೆಳೆಯನ್ನು ತನ್ನ ಇಚ್ಚೆಯಂತೆ ಹೊಲ/ಫಾರಂ ಗೇಟ್ ಅಥವಾ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ಹೊಂದಿದ್ದಾನೆ.

ನಮ್ಮ ಸರ್ಕಾರ ತಿದ್ದುಪಡಿ ತಂದ ನಂತರದಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ The Farmers’ Produce Trade and Commerce (Facilitation and Promotion) Act, 2020 ಜಾರಿಗೆ ತಂದು ರೈತರ ಪರವಾಗಿ ನಿಂತಿದೆ. ಆದರೆ, ಕೆಲವು ಹಿತಾಸಕ್ತಿಗಳು ಇದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಆದರೆ, ವಾಸ್ತವ ಸತ್ಯ ಎಂದಿದ್ದರೂ ಒಂದೇ. ಈ ಬಗ್ಗೆ ಎಲ್ಲರಿಗೂ ಶೀಘ್ರದಲ್ಲಿಯೇ ಮನದಟ್ಟಾಗಲಿದೆ ಎಂದರು.

ನಾನು ಕೋವಿಡ್-19 ಲಾಕ್ಡೌನ್ ಮತ್ತು ನಂತರದ ಸಂದರ್ಭಗಳಲ್ಲಿ 27 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಆಗ ಎಲ್ಲ ಜಿಲ್ಲೆಗಳ ಎಪಿಎಂಸಿಗಳಿಗೂ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇನೆ. ಎಲ್ಲ ರೈತರಿಂದಲೂ ಒಂದೇ ದೂರೆಂದರೆ ನಮ್ಮ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬುದಾಗಿತ್ತು. ಆಗ ಈ ನೂತನ ಎಪಿಎಂಸಿ ಕಾಯ್ದೆ ಬಗ್ಗೆ ಅವರಲ್ಲಿ ನಾನು ಖುದ್ದು ಕೇಳಿದಾಗ ಎಲ್ಲರೂ ಸಂತಸವನ್ನು ವ್ಯಕ್ತಪಡಿಸಿದ್ದಾರೆಯೇ ವಿನಃ ಅದರ ಬಗ್ಗೆ ಎದುರು ಮಾತನಾಡಿರುವುದಿಲ್ಲ.

ವಿರೋಧ ಮಾಡುವ ಬಹುತೇಕರಿಗೆ ಆ ಕಾಯ್ದೆಯಲ್ಲೇನಿದೆ ಎಂಬುದೇ ಗೊತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಒಮ್ಮೆ ಸರಿಯಾದ ದೃಷ್ಟಿಯಿಂದ ಎಲ್ಲರೂ ನೋಡಬೇಕೆಂದು ನಾನು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ. ವಿರೋಧಿಸುವವರು ಸರಿಯಾದ ಅಧಾರವನ್ನಿಟ್ಟುಕೊಳ್ಳಬೇಕು. ಇದುವರೆಗೂ ವಿರೋಧ ಮಾಡುತ್ತಿರುವವರು ಕಾಯ್ದೆ ಜಾರಿ ಬೇಡ ಎನ್ನುತ್ತಿದ್ದಾರೆಯೇ ವಿನ: ಆ ಕಾಯ್ದೆಯನ್ನು ಏಕೆ ಜಾರಿಗೆ ತರಬಾರದು, ತಂದರೆ ಏನಾಗುತ್ತದೆ ಎಂಬ ಬಗ್ಗೆ ಯಾವೊಬ್ಬರೂ ಮಾತನಾಡುತ್ತಿಲ್ಲ. ಅವರ ವಿರೋಧದ ಬಗ್ಗೆ ಅರ್ಥ ಮಾಡಿಕೊಳ್ಳಲು ಇಷ್ಟೇ ಸಾಕಲ್ಲವೇ..?

ಇಲ್ಲಿ ನಾನು ಕೆಲವೊಂದು ಅಂಶಗಳನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಎಪಿಎಂಸಿ ಕಾಯ್ದೆ ಹೇಗೆ ರೈತರಿಗೆ ಉಪಕಾರಿ. ಈ ಮೊದಲಿನ ಕಾಯ್ದೆಯಲ್ಲಿ ಏನು ಸಮಸ್ಯೆ ಇತ್ತು ಎಂಬ ಬಗ್ಗೆ ವಿವರವಾಗಿ ಹೇಳುತ್ತೇನೆ.

ದಂಡ ಹಾಗೂ ಶಿಕ್ಷೆ ಇಲ್ಲ

ಕೇಂದ್ರ ಸರ್ಕಾರದ ಕಾಯ್ದೆ ಪೂರ್ವದಲ್ಲಿ ಇದ್ದ ರಾಜ್ಯ ಸರ್ಕಾರದ ಎಪಿಎಂಸಿ ಕಾಯ್ದೆಯಡಿ ಉತ್ಪನ್ನಗಳ ವ್ಯಾಪಾರ ನಿಯಂತ್ರಣ ರಾಜ್ಯ ವ್ಯಾಪ್ತಿ ಇತ್ತು. ಅದರನ್ವಯ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದಲ್ಲಿಯೇ ಮಾರುವುದು ಅನಿವಾರ್ಯವಿತ್ತು. ಪ್ರಾಂಗಣದ ಹೊರಗೆ ಯಾವುದೇ ವ್ಯಾಪಾರಿ ಖರೀದಿಸಿದಲ್ಲಿ ದಂಡ ಮತ್ತು ಕಾರಾವಾಸದ ಶಿಕ್ಷೆಗೆ ಗುರಿಯಾಗಬೇಕಿತ್ತು. ಪ್ರಸ್ತುತ ತಿದ್ದುಪಡಿಯಲ್ಲಿ ದಂಡ ಮತ್ತು ಶಿಕ್ಷೆ ವಿಧಿಸುವುದನ್ನು ಕೈಬಿಟ್ಟಿರುವುದರಿಂದ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ರಾಜ್ಯ/ಅಂತಾರಾಜ್ಯದಲ್ಲೂ ಮಾರಾಟಕ್ಕೆ ಅವಕಾಶ

ತಿದ್ದುಪಡಿ ನಂತರದಲ್ಲಿ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿ ಅಥವಾ ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಅಂತರ್ ಜಿಲ್ಲೆ ಮತ್ತು ರಾಜ್ಯಗಳಲ್ಲಿ ರೈತರು ನಿರ್ಧರಿಸಿದ ಬೆಲೆಗೆ ಮಾರಾಟ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ.

ಇದ್ದಲ್ಲಿಗೇ ಬಂದು ಖರೀದಿಗೆ ಅವಕಾಶ
ರೈತ ಬಾಂಧವರು ಯಾವುದೇ ವ್ಯಾಪಾರಿಗಳಿಗೆ, ಯಾವುದೇ ಮಾರುಕಟ್ಟೆಗಳಲ್ಲಿ ಬೆಳೆಯನ್ನು ಮಾರಾಟ ಮಾಡಬಹುದು. ಇದಲ್ಲದೆ, ಬೇರೆ ರಾಜ್ಯಗಳಿಗೂ ತೆರಳಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವನ್ನು ಈಗ ಕಲ್ಪಿಸಲಾಗಿದೆ. ಇಲ್ಲವೆ, ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಇಲ್ಲವೇ ಹೊಲಗಳಿಗೇ ಬಂದು ಬೆಳೆಗಳನ್ನು ಖರೀದಿ ಮಾಡಬಹುದು.

ಹೆಚ್ಚಲಿದೆ ಸ್ಪರ್ಧೆ, ಏರಲಿದೆ ಬೆಲೆ

ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಬೆಳೆಯನ್ನು ಮಾರಾಟ ಮಾಡುವ ಹಕ್ಕನ್ನು ರೈತರಿಗೆ ನೀಡಿರುವ ಪರಿಣಾಮ ರೈತನಿಗೆ ಹೆಚ್ಚಿನ ಅವಕಾಶಗಳು ಸಿಗುವುದರೊಂದಿಗೆ ವ್ಯಾಪಾರಿಗಳ ಮಧ್ಯೆ ಸ್ಪರ್ಧೆ ಏರ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಒಬ್ಬರಿಗೇ ಮಾರಾಟ ಮಾಡಬೇಕೆಂಬ ನಿಬಂಧನೆಗಳಿಲ್ಲದೆ, ಹೆಚ್ಚು ಬೆಲೆ ಕೊಟ್ಟು ಕೊಂಡುಕೊಳ್ಳುವವರಿಗೆ ಮಾರಾಟ ಮಾಡಿ ರೈತರು ಅಧಿಕ ಲಾಭವನ್ನು ಗಳಿಸಬಹುದು.

ಮುಕ್ತ ಮಾರುಕಟ್ಟೆ ಅವಕಾಶ

ರೈತ-ಮಾರಾಟಗಾರರಿಗೆ ಈಗಾಗಲೇ ಇರುವ ವಿವಿಧ ಮಾರುಕಟ್ಟೆ ಚಾನಲ್ಗಳಾದ ಮಾರುಕಟ್ಟೆ ಪ್ರಾಂಗಣ, ನೇರ ಖರೀದಿ ಕೇಂದ್ರ, ಖಾಸಗಿ ಮಾರುಕಟ್ಟೆ ಪ್ರಾಂಗಣ, ರೈತ-ಗ್ರಾಹಕ ಮಾರುಕಟ್ಟೆ ಪ್ರಾಂಗಣ ವೇರ್ಹೌಸ್ ಇತ್ಯಾದಿಗಳೊಂದಿಗೆ ಈಗ ಮತ್ತೊಂದು ಉತ್ತಮ ಬದಲಿ (alternative marketing channel) ಸೌಕರ್ಯ ಲಭ್ಯವಿರುವಂತಾಗಿದ್ದು, ಮುಕ್ತ ಮಾರುಕಟ್ಟೆ ದೊರೆತಂತಾಗಿದೆ.

ತಪ್ಪಲಿದೆ ಮಧ್ಯವರ್ತಿಗಳ ಹಾವಳಿ

ರೈತರು ಈ ಹಿಂದೆ ತಮ್ಮ ಉತ್ಪನ್ನಗಳನ್ನು ತಮ್ಮದಲ್ಲದ ಸ್ಥಳಗಳಿಗೆ ಒಯ್ದು ಮಾರಾಟ ಮಾಡಲು ಅಧಿಕೃತ ದಾಖಲೆಗಳಾದ ಪಹಣಿ ಅಥವಾ ಸ್ಥಳೀಯ ರೆವಿನ್ಯೂ ಅಧಿಕಾರಿಗಳು ನೀಡುವ ದೃಢೀಕರಣದೊಂದಿಗೆ ಆವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ತಿದ್ದುಪಡಿಯಿಂಧಾಗಿ ಯಾವುದೇ ದಾಖಲಾತಿಗಳಿಲ್ಲದೆ ತಮ್ಮ ಉತ್ಪನ್ನಗಳನ್ನು ಸಾಗಾಟ ಮಾಡಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ರಾಜ್ಯ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ರೈತರ ಸಾಗಾಣಿಕಾ ವೆಚ್ಚ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಕ್ರಮ ವಹಿಸಿದೆ. ಇದರಿಂದ ರೈತರು ಆರ್ಥಿಕ ಶಕ್ತಿವಂತರಾಗುತ್ತಾರೆ.

ಎಪಿಎಂಸಿ ಮುಚ್ಚಲ್ಲ
ನೂತನ ಎಪಿಎಂಸಿ ಕಾಯ್ದೆಯಿಂದ ಯಾರೂ ಆತಂಕ ಪಡಬೇಕಿಲ್ಲ. ಇದರಿಂದ ಈ ಹಿಂದಿನ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗಿಲ್ಲ. ಅಲ್ಲದೆ, ಎಪಿಎಂಸಿಯನ್ನು ಮುಚ್ಚುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇಲ್ಲ.

ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ

ಎಪಿಎಂಸಿ ಕಾಯ್ದೆ ಜಾರಿಯಿಂದ ಈ ಹಿಂದಿನ ಸೌಲಭ್ಯಗಳು ಇರುವುದಿಲ್ಲವೆಂಬ ಆತಂಕ ಯಾರಿಗೂ ಬೇಡ. ಯಾವುದೇ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಉಂಟಾದಾಗ ಎಂದಿನಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಈ ಗ್ಗೆ ಸರ್ಕಾರ ಅಭಯ ನೀಡುತ್ತದೆ.

ಇದೇನು ಹೊಸತಲ್ಲ, ಯಾವುದೇ ತೊಂದರೆ ಆಗಲ್ಲ
ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ಜೊತೆಯಲ್ಲಿಯೇ 2007 ರಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಎಪಿಎಂಸಿ ಪ್ರಾಂಗಣದ ಹೊರಗೆ ರೈತರಿಂದ ನೇರ ಖರೀದಿಗೆ ಅವಕಾಶ ಕಲ್ಪಿಸಿ ನೇರ ಖರೀದಿ ಕೇಂದ್ರಗಳಿಗೆ ಲೈಸೆನ್ಸ್ ನೀಡಲಾಗಿದೆ. ಇದುವರೆವಿಗೂ 62 ಕಂಪನಿಗಳು ನೇರ ಖರೀದಿ ಲೈಸೆನ್ಸ್ ಪಡೆದು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಹಲವು ವರ್ಷಗಳಿಂದ ದೊಡ್ಡ ದೊಡ್ಡ ಕಂಪನಿಗಳು ಅಧಿಸೂಚಿತ ಕೃಷಿ ಉತ್ಪನ್ನಗಳಲ್ಲಿ ವ್ಯಾಪಾರ ಮಾಡುತ್ತಿದೆ. ತಿದ್ದುಪಡಿ ಏನೂ ಹೊಸತಲ್ಲ.
2014 ರಿಂದ ಆನ್ಲೈನ್ ಟ್ರೇಡಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಹಿಂದೆ ಆಗದ ತೊಂದರೆ ಈಗ ಹೇಗೆ ಆಗಲು ಸಾಧ್ಯ ಎಂಬುದು ನನ್ನ ಪ್ರಶ್ನೆಯಾಗಿದೆ.

ಇದು ರೈತ ಸ್ನೇಹಿ ಕಾಯ್ದೆ. ಇನ್ನು ನಾನು ಕೊನೆಯದಾಗಿ ಹೇಳಬಯಸುವುದೇನೆಂದರೆ, ಇಂತಹ ಒಂದು ಐತಿಹಾಸಿಕ ಕೃಷಿ ಕಾಯ್ದೆಯನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಜಾರಿಗೊಳಿಸಿದ್ದಾರೆ. ಇದೊಂದು ರೈತಸ್ನೇಹಿ ಕಾಯ್ದೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: