ದೇಶಪ್ರಮುಖ ಸುದ್ದಿ

ಯುಮುನಾ ಪರಿಸರಕ್ಕೆ ಹಾನಿ : ಆರ್ಟ್ ಆಫ್‌ ಲಿವಿಂಗ್‌ಗೆ 42 ಕೋಟಿ ರೂ. ದಂಡ ವಿಧಿಸಲು ಶಿಫಾರಸು!

ನವದೆಹಲಿ : ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯು ಕಳೆದ ವರ್ಷ ಯಮುನಾ ನದಿ ತೀರದಲ್ಲಿ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವದಿಂದಾಗಿ ನದಿಯ ಪರಿಸರ ಮತ್ತು ಜೀವ ವೈವಿಧ್ಯಕ್ಕೆ ಭಾರೀ ಹಾನಿ ಉಂಟಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಆರ್ಟ್‌ ಆಫ್‌ ಲಿವಿಂಗ್‌ ಕಳೆದ ವರ್ಷ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವದಿಂದಾಗಿ ಯಮುನಾ ನದಿ ತೀರಕ್ಕೆ ಆಗಿರಬಹುದಾದ ಹಾನಿಯ ಅಂದಾಜು ಲೆಕ್ಕ ಹಾಕಲು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ತಜ್ಞರ ಸಮಿತಿ ರಚಿಸಿತ್ತು.

ಸಮಗ್ರ ಅಧ್ಯಯನ ಮಾಡಿ ಇದೀಗ ವರದಿ ಸಲ್ಲಿರುವ ಸಮಿತಿಯು, ನದಿ ತೀರವನ್ನು ಪುನರುಜ್ಜೀವನ ಗೊಳಿಸಲು ಆರ್ಟ್‌ ಆಫ್‌ ಲಿವಿಂಗ್‌, ಪರಿಸರ ಪರಿಹಾರವಾಗಿ 42 ರೂ. ಕೋಟಿ ನೀಡಬೇಕು ಎಂದು ಎನ್‌ಜಿಟಿಗೆ ಸಲ್ಲಿಸಿರುವ ವರದಿಯಲ್ಲಿ ಸಮಿತಿ ಹೇಳಿದೆ.

ನದಿ ತೀರವನ್ನು ಎರಡು ವಿಭಾಗಗಳಲ್ಲಿ, ಅಂದರೆ ಭೌಗೋಳಿಕವಾಗಿ ಪುನಶ್ಚೇತನಗೊಳಿಸಲು 28.73 ಕೋಟಿ ರೂ ಮತ್ತು  ಜೀವವೈಜ್ಞಾನಿಕವಾಗಿ ಪುನಶ್ಚೇತನಗೊಳಿಸಲು 13.29 ರೂ. ಕೋಟಿ ವೆಚ್ಚವಾಗಲಿದೆ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.

ಕಾಲಮಿತಿ ಮತ್ತು ರೂಪರೇಷೆ ನಿಗದಿಪಡಿಸಿ ನದಿಪಾತ್ರವನ್ನು ಪುನಶ್ಚೇತನಗೊಳಿಸಬೇಕಾಗಿದೆ. ನದಿ ತೀರವನ್ನು ಭೌಗೋಳಿಕವಾಗಿ ಪುನರುಜ್ಜೀವನಗೊಳಿಸುವ ಕೆಲಸವನ್ನು ಈ ಕೂಡಲೇ ಆರಂಭಿಸಬೇಕು. ಎರಡು ವರ್ಷಗಳಲ್ಲಿ ಇದು ಪೂರ್ಣಗೊಳ್ಳಬೇಕಾಗಿದ್ದು, ಜೀವವೈವಿಧ್ಯಕ್ಕೆ ಆಗಿರುವ ಹಾನಿಯನ್ನು ಸರಿಪಡಿಸುವ ಕೆಲಸಕ್ಕೂ ಈಗಲೇ ಚಾಲನೆ ನೀಡಬೇಕು. ಆದರೆ, ಅದು ಪೂರ್ಣಗೊಳ್ಳಲು 10 ವರ್ಷಗಳು ಬೇಕಾಗಬಹುದು ಎಂದು ಜಲಸಂಪನ್ಮೂಲ ಸಚಿವಾಲಯದ ಮಾಜಿ ಕಾರ್ಯದರ್ಶಿ ಶಶಿ ಶೇಖರ್‌ ನೇತೃತ್ವದ ಏಳು ಸದಸ್ಯರ ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.

ಈ ಪುನಶ್ಚೇತನ ಕಾಮಗಾರಿಯನ್ನು ಸಮರ್ಪಕ ರೀತಿಯಲ್ಲಿ ಮೇಲ್ವಿಚಾರಣೆ ನಡೆಸಲು ಎನ್‌ಜಿಟಿ ಸಮಿತಿಯೊಂದನ್ನು ರಚಿಸಬಹುದಾಗಿದೆ ಎಂದು ಸಮಿತಯು ಸಲಹೆ ನೀಡಿದೆ.

ದೆಹಲಿಯ ಯಮುನಾ ದಂಡೆಯಲ್ಲಿ ಕಳೆದ ವರ್ಷದ ಮಾರ್ಚ್‌ 11 ರಿಂದ 13 ರವರೆಗೆ ‘ವಿಶ್ವ ಸಾಂಸ್ಕೃತಿಕ ಉತ್ಸವ’ ಹೆಸರಿನಲ್ಲಿ ಆರ್ಟ್‍ ಆಫ್‍ ಲಿವಿಂಗ್‍ ಕಾರ್ಯಕ್ರಮ ಆಯೋಜಿಸಿತ್ತು. ಸಮಿತಿ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆ, ಎಒಎಲ್‍ ಒಂದು ಜವಾಬ್ದಾರಿಯುತ ಮತ್ತು ಪರಿಸರ ಸೂಕ್ಷ್ಮತೆ ಹೊಂದಿರುವ ಎನ್‌ಜಿಒ. ನಾವು ಪಿತೂರಿಯ ಬಲಿಪಶುಗಳು. ಸತ್ಯಕ್ಕಾಗಿ ಹೋರಾಡುತ್ತೇವೆ ಎಂದು ಹೇಳಿದೆ.

(ಎನ್‍.ಬಿ.ಎನ್‍)

Leave a Reply

comments

Related Articles

error: