ಮೈಸೂರು

ಬಿಳಿಗಿರಿರಂಗನ ಬೆಟ್ಟದಲ್ಲಿ ರಕ್ಷಣೆ ಮಾಡಿ ಮೈಸೂರು ಮೃಗಾಲಯಕ್ಕೆ ತಂದಿದ್ದ ಆನೆಮರಿ ಸಾವು

ಮೈಸೂರು,ಡಿ.14:- ಕಳೆದ ಜುಲೈನಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ರಕ್ಷಣೆ ಮಾಡಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ತಂದಿದ್ದ ಆನೆಮರಿ ವೇದಾವತಿ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ.
ಈ ಆನೆಮರಿಯು ಜನಿಸಿ ಹದಿನೈದು ದಿನಗಳಾಗಿರುವಾಗ ಮೃಗಾಲಯದ ಸಿಬ್ಬಂದಿ ರಕ್ಷಣೆ ಮಾಡಿ ತಂದಿದ್ದರು. ಅದರ ಆರೈಕೆಗಾಗಿ ಸೋಮು ಎಂಬವರನ್ನು ನಿಯೋಜಿಸಲಾಗಿತ್ತು. ಸೋಮು ಈ ಹಿಂದೆ ಐದು ಆನೆಮರಿಗಳನ್ನು ಆರೈಕೆ ಮಾಡಿ ಹೆಸರು ಗಳಿಸಿದ್ದಾರೆ. ವೇದಾವತಿ ಆನೆಮರಿಯ ಆರೋಗ್ಯ ಸುಧಾರಿಸದೆ ಭಾನುವಾರ ಬೆಳಿಗ್ಗೆ 11 ಗಂಟೆಯ ಸಮಯದಲ್ಲಿ ತೀರಿಕೊಂಡಿದೆ. ಸಹಜವಾಗಿ ಯಾವುದೇ ಆನೆಮರಿಗಳು ಹುಟ್ಟಿದ ಒಂದು ವರ್ಷದೊಳಗೆ ಅವುಗಳ ಆರೈಕೆ ತುಂಬಾ ಸೂಕ್ಷ್ಮತೆಯಿಂದ ಕೂಡಿರುತ್ತದೆ. ಅದರಲ್ಲೂ ವೇದಾವತಿ ಆನೆಮರಿಗೆ ಸ್ವತಃ ಆಹಾರ ಸೇವಿಸುವ ಶಕ್ತಿ ಇರಲಿಲ್ಲ. ಹೀಗಾಗಿ ಸೋಮು ಅವರೇ ಆಹಾರ ಸಿದ್ಧಪಡಿಸಿ ಪೋಷಿಸಿಸುತ್ತಿದ್ದರು. ಆನೆಮರಿಗೆ ಸೋಂಕು ಕಾಣಿಸಿಕೊಂಡು ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.
ಜನಪ್ರಿಯವಾಗಿದ್ದ ಆನೆಮರಿ
ಭಾನುವಾರ ಬೆಳಿಗ್ಗೆ ಮೃಗಾಲಯದ ಪಶು ಚಿಕಿತ್ಸಾಲಯದಲ್ಲಿ ಮೃತಪಟ್ಟ ವೇದಾವತಿ ಎಂಬ ಆನೆಮರಿಯು ಲಾಕ್ ಡೌನ್ ಸಮಯದಲ್ಲಿ ಮೃಗಾಲಯದಲ್ಲಿ ಸಂಚರಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲೂ ಆನೆಮರಿಯ ಚಲನವಲನವನ್ನು ಪ್ರಸಾರ ಮಾಡಲಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: