ಕರ್ನಾಟಕಪ್ರಮುಖ ಸುದ್ದಿ

ಸಾರಿಗೆ ನೌಕರರ ದಾರಿ ತಪ್ಪಿಸಿದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಚಿವರ ಆಕ್ರೋಶ

ಬೆಂಗಳೂರು,ಡಿ.14-ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರ ದಾರಿತಪ್ಪಿಸುತ್ತಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಚಿವರುಗಳು ಕಿಡಿಕಾರಿದ್ದಾರೆ.

ಉಪಮುಖ್ಯಮಂತ್ರಿಗಳಾದ ಡಾ.ಅಶ್ವತ್ಥನಾರಾಯಣ್, ಗೃಹಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಿಡಿ ಕಾರಿದ್ದಾರೆ.

ಸರಕಾರಿ ನೌಕರರೆಂದು ಪರಿಗಣಿಸಿ ಎಂಬ ಬೇಡಿಕೆ ಹೊರತುಪಡಿಸಿ ಉಳಿದೆಲ್ಲಾ ಬೇಡಿಕೆಗಳಿಗೂ ಅಸ್ತು ಎಂದಿದ್ದ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂ ಮತ್ತೆ ಪ್ರತಿಭಟನೆ ನಿರ್ಧಾರಕ್ಕೆ ಆಕ್ರೋಶವ್ಯಕ್ತಪಡಿಸಿದ್ದಾರೆ.

ಅಶ್ವತ್ಥನಾರಾಯಣ್ ಅವರು ಟ್ವೀಟ್ ಮಾಡಿ, ಸಾರಿಗೆ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಅವರನ್ನು ದಿಕ್ಕು ತಪ್ಪಿಸುತ್ತಿರುವ ನಕಲಿ ನಾಯಕರಿಗೆ ತಕ್ಕ ಶಾಸ್ತಿ ಕಾದಿದೆ. ಮುಷ್ಕರ ಮುದುವರಿಸುವುದು ಸರ್ವಥಾ ಸರಿಯಲ್ಲ. ಮುಖ್ಯಮಂತ್ರಿ ಮುಂದೆಯೇ ಮುಷ್ಕರ ವಾಪಸ್‌ ಪಡೆಯುವುದಾಗಿ ಒಪ್ಪಿಕೊಂಡು ಹೋದ ಮುಖಂಡರು ಸ್ವಲ್ಪಹೊತ್ತಿನಲ್ಲೇ ವರಸೆ ಬದಲಿಸಿದ್ದು ಯಾಕೆ? ಅವರ ಹಿಂದೆ ಯಾರಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಕಾಣದ ಶಕ್ತಿಗಳು ಸಾರಿಗೆ ನೌಕರರನ್ನು ದಾರಿ ತಪ್ಪಿಸುತ್ತಿವೆ. ರೈತ ನಾಯಕ ಕೋಡಿಹಳ್ಳಿ‌ ಚಂದ್ರಶೇಖರ್ ಇದ್ದಕ್ಕಿದ್ದಂತೆ ಸಾರಿಗೆ ನೌಕರರ ಮುಖಂಡರಾಗಿದ್ದು ಹೇಗೆ? ಇದರಲ್ಲಿ ಅಡಗಿರುವ ಹಿತಾಸಕ್ತಿ ಏನು? ಮುಂದೆ ಕಾರ್ಮಿಕರನ್ನು ಬಿಟ್ಟು ಹಿಂದೆ ಯಾರೆಲ್ಲ ಆಟ ಆಡುತ್ತಿದ್ದಾರೆ? ಅವರ ದುರುದ್ದೇಶವೇನಿದೆ? ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ ಎಂದಿದ್ದಾರೆ.

ಮುಖ್ಯಮಂತ್ರಿಗಳು ಸಾಧ್ಯವಾಗುವ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಒಮ್ಮೆ ಹೇಳಿದರೆಂದರೆ ಬೇಡಿಕೆಗಳು ಕ್ಷಿಪ್ರಗತಿಯಲ್ಲಿ ಈಡೇರುತ್ತವೆ ಎಂಬುದು ಅನೇಕ ಸಲ ಸಾಬೀತಾಗಿದೆ. ಜನರು ಬಸ್‌ ಸೌಕರ್ಯವಿಲ್ಲದೆ ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಈ ಬಿಕ್ಕಟ್ಟು ಮತ್ತೂ ಹೆಚ್ಚಾಗುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಸಾರಿಗೆ ಸಿಬ್ಬಂದಿ ಹಲವಾರು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದರು. ಅವುಗಳಲ್ಲಿ ಸರಕಾರದ ಆರ್ಥಿಕ ಶಕ್ತಿಯ ಇತಿಮಿತಿಯೊಳಗೆ ಕೆಲ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಮಾತಿಗೆ ಓಗೊಟ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಬೇಕು. ಜನರು ಸಂಕಷ್ಟ ಅನುಭವಿಸಿದ್ದು ಸಾಕು ಎಂದು ಹೇಳಿದ್ದಾರೆ.

ಡಾ.ಕೆ.ಸುಧಾರ್ ಅವರು, ರೈತ ನಾಯಕರು ಎನಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಾರಿಗೆ ವ್ಯವಸ್ಥೆ ಹಾಗೂ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಅರಿವಿದೆಯೇ? ತಮಗೆ ಅರಿವಿಲ್ಲದ ವಿಷಯಗಳ ಬಗ್ಗೆ ಮೂಗು ತೂರಿಸುವುದು ಎಷ್ಟು ಸಮಂಜಸ ಎಂದು ಜನ ಕೇಳುತ್ತಿರುವ ಪ್ರಶ್ನೆಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಮೊದಲು ಉತ್ತರ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಸಾರಿಗೆ ವ್ಯವಸ್ಥೆ ಅತ್ಯಂತ ಪ್ರಮುಖ ಮತ್ತು ಅಗತ್ಯ ಸೇವೆಯಾಗಿದ್ದು, ಶ್ರೀ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಪದೇ ಪದೇ ಮುಷ್ಕರ, ಬಂದ್ ಗಳಿಗೆ ಕುಮ್ಮಕ್ಕು ನೀಡುವ ಮೂಲಕ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆ ಉಂಟುಮಾಡಿ ಬಡವರು, ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ  ನಾಯಕರು ಕಾಂಗ್ರೆಸ್ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರಗಳು ಇದ್ದ ಸಂದರ್ಭದಲ್ಲಿ ಈ ಬೇಡಿಕೆಗಳನ್ನು ಏಕೆ ಪೂರೈಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಸಾರಿಗೆ ನೌಕರರು ಮುಂದಿಟ್ಟಿರುವ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಬಿಎಸ್ವೈ ಅವರು ಈಗಾಗಲೇ ಭರವಸೆ ನೀಡಿದ್ದಾರೆ. ತಮ್ಮನ್ನು ದಾರಿ ತಪ್ಪಿಸುತ್ತಿರುವವರ ಪ್ರಚೋದನೆಗೆ ಒಳಗಾಗದೆ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಬಸವರಾಜ್ ಬೊಮ್ಮಾಯಿ ಅವರು, ನಾಳೆ ದಿ. 14/12/2020 ರಿಂದ ಬಿಎಂಟಿಸಿ ಹಾಗೂ ಮೂರು ನಿಗಮಗಳ ಬಸ್ ಗಳ ಸೇವೆಯನ್ನು ಪ್ರಾರಂಭಿಸಲು ಸಾರಿಗೆ ನೌಕರಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ಬಸ್ ಗಳ ಸೇವೆ ಪ್ರಾರಂಭಿಸುವ ನೌಕರರರಿಗೆ ಸರಕಾರದಿಂದ ಸಂಪೂರ್ಣ ರಕ್ಷಣೆ ನೀಡಲಾಗುವುದು ಹಾಗೂ ಇದಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಟ್ವೀಟ್ ಮಾಡಿದ್ದರು. (ಎಂ.ಎನ್)

 

Leave a Reply

comments

Related Articles

error: