ಕರ್ನಾಟಕಪ್ರಮುಖ ಸುದ್ದಿ

ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಪಡಿತರ ಮಾರಿದರೆ 6 ತಿಂಗಳು ರೇಷನ್ ಕಾರ್ಡ್ ಅಮಾನತು

ರಾಜ್ಯ(ಬೆಂಗಳೂರು).ಡಿ.14:- ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಪಡಿತರವನ್ನು ಮಾರಿದರೆ, ಆರು ತಿಂಗಳು ರೇಷನ್ ಕಾರ್ಡ್ ಅಮಾನತು ಆಗಲಿದೆ. ಅಲ್ಲದೇ, ದಂಡವೂ ಬೀಳಲಿದೆ.
ಅನ್ನಭಾಗ್ಯ ಯೋಜನೆಯಡಿ ಸಿಗುವ ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟ ಮಾಡುವ ಫಲಾನುಭವಿಗಳ ಪಡಿತರ ಚೀಟಿ ಆರು ತಿಂಗಳು ಅಮಾನತು ಆಗಲಿದೆ. ಮಾರುಕಟ್ಟೆಯ ದರದಲ್ಲಿಯೇ ಅಕ್ಕಿಯನ್ನು ದಂಡದ ರೂಪದಲ್ಲಿ ಪಡೆಯಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಉಚಿತವಾಗಿ ಹಂಚಿಕೆ ಯಾಗುವ ಅಕ್ಕಿಯನ್ನು ಫಲಾನುಭವಿಗಳು ಹಣಕ್ಕೆ ಮಾರುತ್ತಿದ್ದಾರೆ ಎಂಬ ಸಾಕಷ್ಟು ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಆದೇಶ ಹೊರಡಿಸಿದೆ.
ಅಕ್ಕಿ ಮಾರಾಟ ಮಾಡಿ ಸಿಕ್ಕಿ ಬೀಳುವ ಫಲಾನುಭವಿಗಳ ಪಡಿತರ ಚೀಟಿ ಆರು ತಿಂಗಳು ಅಮಾನತು ಮಾಡಿ, ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಇಲಾಖೆ ಆದೇಶದಲ್ಲಿ ಎಚ್ಚರಿಸಿದೆ.
ಕೇಂದ್ರವು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 30 ರೂ.ನಂತೆ ಖರೀದಿಸಿ ರಾಜ್ಯಕ್ಕೆ 3 ರೂ.ಗೆ ಅಕ್ಕಿ ನೀಡುತ್ತಿದೆ. ಪ್ರತಿ ತಿಂಗಳು ರಾಜ್ಯಕ್ಕೆ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡುತ್ತಿದೆ. ಹಾಗಾಗಿ, ಕೇಂದ್ರ ಸಹಕಾರದೊಂದಿಗೆ ಸರ್ಕಾರವು ಆಹಾರ ಧಾನ್ಯ ವಿತರಿಸುತ್ತಿದೆ. ರಾಜ್ಯದಲ್ಲಿ 1,17,012 ಬಿಪಿಎಲ್, 10,92,580 ಅಂತ್ಯೋದಯ ಹಾಗೂ 21,05,000 ಎಪಿಎಲ್ ಕಾರ್ಡ್ ಸೇರಿ ಒಟ್ಟು 1,48,98,592 ಕಾರ್ಡ್ಗಳಿವೆ. ಪ್ರತಿ ತಿಂಗಳು 19,972 ನ್ಯಾಯಬೆಲೆ ಅಂಗಡಿಗಳಿಂದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕುಟುಂಬಕ್ಕೆ 2 ಕೆಜಿ ಗೋಧಿ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: