ಮೈಸೂರು

ಈಜಲು ವರುಣಾ ನಾಲೆಗಿಳಿದ ಬಾಲಕರಿಬ್ಬರು ನೀರು ಪಾಲು

ಮೈಸೂರು,ಡಿ.15:- ಈಜಲು ವರುಣಾ ನಾಲೆಗಿಳಿದ ಬಾಲಕರಿಬ್ಬರು ಮುಳುಗಿ ಸಾವನ್ನಪ್ಪಿರುವ ಘಟನೆ ಗೂರೂರು ಬಳಿ ನಡೆದಿದೆ.
ಮೃತ ಬಾಲಕರನ್ನು ಮೈಸೂರು ಕುವೆಂಪುನಗರದ ಎಂ ಬ್ಲಾಕ್ ನ 2ನೇ ಕ್ರಾಸ್ 2ನೇ ಮೇನ್ ನಿವಾಸಿ ಮುರಳೀಧರ್ ಅವರ ಪುತ್ರ ಹರಿಕೃಷ್ಣನ್ (15) ಹಾಗೂವೆಂಕಟೇಶ್ ಅವರ ಮಗ ವೈಭವ್(13)ಎಂದು ಗುರುತಿಸಲಾಗಿದೆ.
ವೆಂಕಟೇಶ್ ಅವರ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆಗೆ ಇದ್ದ ಮುರಳೀಧರ್ ಪುತ್ರ ಹರಿಕೃಷ್ಣನ್ ಮತ್ತು ವೆಂಕಟೇಶ್ ಪುತ್ರ ವೈಭವ್ ಇಬ್ಬರೂ ಸೈಕಲ್ ನಲ್ಲಿ ಭಾನುವಾರ ಮಧ್ಯಾಹ್ನ ಮನೆಯಿಂದ ಹೊರಟಿದ್ದು ಹೋಗುವಾಗ ಇನ್ನೂ ಇಬ್ಬರು ಸ್ನೇಹಿತರು ಕರೆದೊಯ್ದಿದ್ದರು ಎನ್ನಲಾಗಿದೆ. ಮಹದೇವಪುರ ಮಾರ್ಗದಲ್ಲಿ ಸೈಕಲ್ ನಲ್ಲಿ ಗೂರೂರು ಬಳಿ ವರುಣಾ ನಾಲೆಗೆ ಹರಿಕೃಷ್ಣನ್ ಮತ್ತು ವೈಭವ್ ಇಳಿದಿದ್ದಾರೆ. ಈಜಲು ಹೆದರಿದ ಮತ್ತಿಬ್ಬರು ನಾಲೆಯ ದಂಡೆಯ ಮೇಲೆಯೇ ಕುಳಿತಿದ್ದರು ಎನ್ನಲಾಗಿದೆ.
ನೋಡನೋಡುತ್ತಲೇ ಈಜುತ್ತಿದ್ದ ಇಬ್ಬರೂ ಮುಳುಗುತ್ತಿರುವುದನ್ನು ಕಂಡು ಭಯಗೊಂಡ ಬಾಲಕರು ಕಿರುಚಿಕೊಂಡಾಗ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿದ್ದರಾದರೂ ಬಾಲಕರನ್ನು ರಕ್ಷಿಸಲಾಗಲಿಲ್ಲ. ಉಳಿದವರಿಬ್ಬರು ಮನೆಗೆ ಬಂದು ವಿಷಯ ಹೇಳಿದಾಗಲೇ ಮನೆಯವರಿಗೆ ವಿಷಯ ತಿಳಿದು ಬಂದಿದೆ.
ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯ ಸಬ್ ಇನ್ಸಪೆಕ್ಟರ್ ವನರಾಜು ಹಾಗೂ ಸಿಬ್ಬಂದಿ ಮಹಜರು ನಡೆಸಿದ್ದು, ಶವಾಗಾರದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: