ಪ್ರಮುಖ ಸುದ್ದಿವಿದೇಶ

‘ಎಲೆಕ್ಟೊರಲ್‌ ಕಾಲೇಜ್‌’ ಮತದಾನದಲ್ಲೂ ಜೋ ಬೈಡನ್ ಗೆ ಗೆಲುವು

ವಾಷಿಂಗ್ಟನ್‌,ಡಿ.15-ಅಮೆರಿಕದ ನೂತನ ಅಧ್ಯಕ್ಷರನ್ನಾಗಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಅವರನ್ನು ಮತ್ತು ಉಪಾಧ್ಯಕ್ಷರನ್ನಾಗಿ ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರನ್ನು ಅಲ್ಲಿನ ‘ಎಲೆಕ್ಟೊರಲ್‌ ಕಾಲೇಜ್‌’ ಅಧಿಕೃತವಾಗಿ ಆಯ್ಕೆ ಮಾಡಿದೆ.

ನವೆಂಬರ್ 3 ರಂದು ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ವಿವಿಧ ರಾಜ್ಯಗಳ ಎಲೆಕ್ಟೊರಲ್‌ ಕಾಲೇಜ್‌ ಸದಸ್ಯರು ನಿನ್ನೆ ಸಂವಿಧಾನದ ನಿಯಮಾನುಸಾರ ಮತ್ತು ಒಕ್ಕೂಟ ವ್ಯವಸ್ಥೆಯ ಕಾನೂನಿಗೆ ಅನುಗುಣವಾಗಿ ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಿದರು.

ಮತಗಳಿಕೆ ಮತ್ತು ಎಲೆಕ್ಟೊರಲ್‌ ಸ್ಥಾನಗಳಿಕೆಯಲ್ಲಿ ಸೋತರೂ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ವಾದಿಸುತ್ತಾ, ಚುನಾವಣೆ ಫಲಿತಾಂಶವನ್ನೇ ತಡೆಯಲು ಕಾನೂನು ಹೋರಾಟವನ್ನು ಆರಂಭಿಸಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೋರಾಟಕ್ಕೆ ಈ ಬೆಳಗವಣಿಗೆಯು ಅಂತ್ಯ ಹಾಡಿತು.

‘ಎಲೆಕ್ಟೊರಲ್‌ ಕಾಲೇಜ್‌’ ಸಭೆ ಕೇವಲ ಔಪಚಾರಿಕ. ಆದರೆ, ಚುನಾವಣೆ ಅಕ್ರಮದ ಬಗ್ಗೆ ಟ್ರಂಪ್ ಆರೋಪ ಮಾಡಿದ ಹಿನ್ನೆಲೆಯಲ್ಲಿ ಎಲೆಕ್ಟೊರ್‌ ಸಭೆ ಅಂತರರಾಷ್ಟ್ರೀಯ ಗಮನ ಸೆಳೆದಿತ್ತು.

ಬೈಡನ್‌ ಪರವಾಗಿ ನ್ಯೂಯಾರ್ಕ್‌ನಿಂದ ಮತ ಚಲಾಯಿಸಿದ ಎಲೆಕ್ಟೊರಲ್‌ ಕಾಲೇಜ್‌ ಸದಸ್ಯೆ ಹಿಲರಿ ಕ್ಲಿಂಟನ್‌, ‘ನಾವು ಎಲೆಕ್ಟೊರಲ್‌ ಕಾಲೇಜನ್ನು ರದ್ದುಗೊಳಿಸಬೇಕು. ನಮ್ಮ ಅಧ್ಯಕ್ಷರನ್ನು ಜನಪ್ರಿಯ ಮತಗಳ ಆಧಾರದಲ್ಲಿ ಆಯ್ಕೆ ಮಾಡಬೇಕು. ಆದರೆ, ಎಲೆಕ್ಟೊರಲ್‌ ಕಾಲೇಜ್‌ ಸಂಪ್ರದಾಯ ಇನ್ನೂ ಅಸ್ತಿತ್ವದಲ್ಲಿದೆ. ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ನ್ಯೂಯಾರ್ಕ್‌ ಮೂಲಕ ಮತ ಚಲಾಯಿಸಲು ನಾನು ಹೆಮ್ಮೆಪಡುತ್ತೇನೆ,’ ಎಂದು ಹೇಳಿದರು. ಕ್ಲಿಂಟನ್‌ ಈ ಹಿಂದಿನ ಚುನಾವಣೆಯಲ್ಲಿ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಅಮೆರಿಕದಲ್ಲಿ 50 ರಾಜ್ಯಗಳಿಂದ 538 ಎಲೆಕ್ಟೊರಲ್‌ ಕಾಲೇಜು ಮತಗಳಿದ್ದು, ಅಧ್ಯಕ್ಷ ಸ್ಥಾನ ಅಲಂಕರಿಸಲು 270 ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯ. ಅದರೆ, ರಿಪಬ್ಲಿಕನ್ ಪಕ್ಷದ ಹಾಲಿ ಅಧ್ಯಕ್ಷ ಟ್ರಂಪ್‌ ಎದುರು ಡೆಮಾಕ್ರಟಿಕ್‌ ಪಕ್ಷದ ಆಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೋ ಬೈಡನ್‌ ಅವರು 306 ಮತಗಳನ್ನು ಪಡೆದಿದ್ದರು. ಇದಕ್ಕೆ ಪ್ರತಿಯಾಗಿ ಟ್ರಂಪ್‌ 232 ಸ್ಥಾನಗಳನ್ನು ಗೆದ್ದಿದ್ದಾರೆ.

ಬರಾಕ್ ಒಬಾಮ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡನ್ ಜನವರಿ 20 ರಂದು ಅಮೆರಿಕದ 46 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ತಾವು ಗೆಲುವು ಸಾಧಿಸಿದ್ದನ್ನು ‘ಎಲೆಕ್ಟೋರಲ್‌ ಕಾಲೇಜ್‌’ ದೃಢಪಡಿಸಿದ ನಂತರ ಮಾತನಾಡಿದ ಜೋ ಬೈಡನ್ ಅವರು, ‘ಗಾಯಗಳನ್ನು ಮರೆತು, ಎಲ್ಲರೂ ಒಗ್ಗಟ್ಟಿನಿಂದ ಮುಂದಡಿ ಇಡುವ ಮೂಲಕ ಹೊಸ ಆರಂಭಕ್ಕೆ ಸಜ್ಜಾಗೋಣ’ ಎಂದಿದ್ದಾರೆ.

ಅಮೆರಿಕದ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆಯಿತು. ಬೆದರಿಸುವ ತಂತ್ರವೂ ನಡೆಯಿತು. ಆದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲ ಒತ್ತಡಗಳನ್ನು ಎದುರಿಸಿ ಪುಟಿದೆದ್ದಿತು. ತಾನು ಬಲಿಷ್ಠ ಎಂಬುದನ್ನೂ ಸಾಬೀತುಪಡಿಸಿತು. ಜನರು ನೀಡಿದ ತೀರ್ಪನ್ನು ರದ್ದುಗೊಳಿಸಲು ಟ್ರಂಪ್‌ ಯತ್ನಿಸಿದರು. ಆದರೆ, ನಮ್ಮ ಸಂವಿಧಾನ, ಈ ನೆಲದ ಕಾನೂನು ಹಾಗೂ ಜನರ ಇಚ್ಛಾಶಕ್ತಿಯೇ ಕೊನೆಗೆ ಗೆದ್ದಿತು ಎಂದು ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: