ಕ್ರೀಡೆಪ್ರಮುಖ ಸುದ್ದಿ

ಹೆಣ್ಣು ಮಗುವಿನ ತಂದೆಯಾದ ಕಿವೀಸ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್: ಶುಭಕೋರಿದ ವಿರಾಟ್ ಕೊಹ್ಲಿ

ಆಕ್ಲೆಂಡ್‌,ಡಿ.16- ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್ ಅವರ ಪತ್ನಿ ಸಾರಾ ರಹೀಮ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಾವು ಹೆಣ್ಣು ಮಗುವಿನ ತಂದೆಯಾಗಿರುವ ಸಂತಸದ ವಿಚಾರವನ್ನು ಸ್ವತಃ ವಿಲಿಯಮ್ಸನ್ ಅವರೇ ಇನ್‌ಸ್ಟಾಗ್ರಾಮ್‌ ಮೂಲಕ ತಿಳಿಸಿದ್ದಾರೆ. ಮುದ್ದಾದ ಮಗುವನ್ನು ಬಿಗಿದಪ್ಪಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿ, `ಮುದ್ದಾದ ಹೆಣ್ಣು ಮಗು ನಮ್ಮ ಕುಟುಂಬ ಸೇರಿರುವುದಕ್ಕೆ ಸಂತಸ ಹೆಚ್ಚಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಇವರಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಆಟಗಾರರು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಆನ್‌ ಫೀಲ್ಡ್‌ನಲ್ಲಿ ಎಷ್ಟೇ ಜಿದ್ದಾಜಿದ್ದಿನ ಎದುರಾಳಿಗಳಾದರೂ ಆಫ್‌ ದಿ ಫೀಲ್ಡ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೇನ್‌ ವಿಲಿಯಮ್ಸನ್‌ ಆತ್ಮೀಯ ಗೆಳೆಯರು. ಅಂತೆಯೇ ವಿಲಿಯಮ್ಸನ್‌ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ ಕೂಡಲೇ ಉತ್ತರಿಸಿರುವ ಕೊಹ್ಲಿ, “ನಿಮ್ಮ ಜೀವನದಲ್ಲಿ ಸಿಕ್ಕಿರುವ ಈ ಆಶೀರ್ವಾದಕ್ಕೆ ಶುಭಾಶಯಗಳು. ನಮ್ಮಿಂದ ನಿಮಗೆ ಸಾಕಷ್ಟು ಪ್ರೀತಿ ಕಳುಹಿಸಿದ್ದೇವೆ,” ಎಂದು ಕೊಹ್ಲಿ ಕಾಮೆಂಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಕೂಡ ಶುಭ ಹಾರೈಸಿದೆ.

ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದ ಕೇನ್‌ ವಿಲಿಯಮ್ಸನ್‌ ಈ ಸಲುವಾಗಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಿಂದ ಹೊರಗುಳಿದಿದ್ದರು. ಪಂದ್ಯದಲ್ಲಿ ಜಯ ದಾಖಲಿಸಿದ ಕಿವೀಸ್‌ ಪಡೆ 2 ಪಂದ್ಯಗಳ ಸರಣಿಯನ್ನು ವೈಟ್‌ವಾಶ್‌ ಮಾಡಿತ್ತು.

ಅಂದಹಾಗೆ ಕ್ರಿಕೆಟಿಗರು ಈ ರೀತಿ ಪ್ಯಾಟರ್ನಿಟಿ ರಜೆಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಕೂಡ ರಜೆಗೆ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಈ ಮೂಲಕ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅಂತಿಮ ಮೂರು ಪಂದ್ಯಗಳಿಗೆ ವಿರಾಟ್‌ ಅಲಭ್ಯರಾಗಲಿದ್ದು, ಪತ್ನಿ ಅನುಷ್ಕಾ ಶರ್ಮಾ ಜೊತೆಗಿರಲು ಭಾರತಕ್ಕೆ ಹಿಂದಿರುಗಲಿದ್ದಾರೆ. ಕೊಹ್ಲಿ ನಿರ್ಧಾರವನ್ನು ಹಲವು ಕ್ರಿಕೆಟಿಗರು ಬೆಂಬಲಿಸಿದ್ದಾರೆ.

ವಿಲಿಯಮ್ಸನ್‌ ಕೂಡ ಇದೇ ಹಾದಿಯಲ್ಲಿ ಸಾಗಿದ್ದಾರೆ. ಆದರೆ, ವಿಲಿಯಮ್ಸನ್‌ ಹೆಚ್ಚು ಪಂದ್ಯಗಳಿಗೆ ಗೈರಾಗುತ್ತಿಲ್ಲ. ಕೇವಲ ಒಂದು ಟೆಸ್ಟ್‌ನಿಂದ ಮಾತ್ರವೇ ಹೊರಗುಳಿದರು. ರಜೆಗೂ ಮುನ್ನ ಮೊದಲ ಟೆಸ್ಟ್‌ನಲ್ಲಿ ಆಡಿ ದ್ವಿಶತಕ ಬಾರಿಸುವ ಮೂಲಕ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದರು.

ಕೇನ್‌ ಕಿವೀಸ್‌ ತಂಡದ ಸೇವೆಗೆ ಎಂದು ಮರಳುತ್ತಾರೆ ಎಂಬುದು ಇನ್ನು ಖಾತ್ರಿಯಾಗಿಲ್ಲ. ಸದ್ಯಕ್ಕೆ ನ್ಯೂಜಿಲೆಂಡ್‌ ತಂಡದ ಸೆಲೆಕ್ಟರ್‌ಗಳು ಮುಂಬರುವ ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೂ ವಿಲಿಯಮ್ಸನ್‌ಗೆ ವಿರಾಮ ನೀಡಿದ್ದಾರೆ. ಪ್ರವಾಸಿ ಪಾಕಿಸ್ತಾನ ವಿರುದ್ಧದ ಸರಣಿಯ ಮೊದಲ ಪಂದ್ಯ ಡಿ.18ರಂದು ನಡೆಯಲಿದ್ದು, ಕೊನೆಯ ಎರಡು ಪಂದ್ಯಗಳಿಗೆ ಕೇನ್‌ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 2ನೇ ಮತ್ತು 3ನೇ ಪಂದ್ಯ ಕ್ರಮವಾಗಿ ಡಿ.20 ಮತ್ತು 22ರಂದು ನಡೆಯಲಿವೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: