ಮೈಸೂರು

ನಾಗರಿಕರಿಗೆ ವಿಳಂಬವಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರ ಹಮ್ಮಿಕೊಂಡ ಯೋಜನೆ ಸಕಾಲ : ಸುಧಾ

ಮೈಸೂರು,ಡಿ.18:- ಮೈಸೂರಿನ ಪ್ರತಿಷ್ಠಿತ ಎಸ್‍ ಬಿಆರ್‍ ಆರ್ ಮಹಾಜನ ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ‘ಸಕಾಲ ಸಪ್ತಾಹ ಆಚರಣೆ’ ಅಂಗವಾಗಿ ಮೈಸೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಸಕಾಲ ಐಟಿ ಕನ್ಸಲ್ ಟೆಂಟ್ ಆಗಿ ಕೆಲಸ ನಿರ್ವಹಿ ಸುತ್ತಿರುವ ಸುಧಾ ಅವರಿಂದ ಸಕಾಲದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಇಂದು ಕಾಲೇಜಿನ ದೃಶ್ಯಮಾಧ್ಯಮದ ಕೊಠಡಿ ಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸುಧಾ ಅವರು ಸಕಾಲದ ಬಗ್ಗೆ ವಿವರಣೆ ನೀಡುತ್ತ, ಸಕಾಲ ಎಂದರೆ ‘ನಿಗದಿತ ಸಮಯ’. ಅಂದರೆ, ನಾಗರಿಕರಿಗೆ ವಿಳಂಬವಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರ ಈ ಯೋಜನೆಯನ್ನು ತಂದಿದೆ. ಇದು ‘ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ 2012’ ಸಕಾಲ ಯೋಜನೆಯಡಿಯಲ್ಲಿ 2ನೇ ಏಪ್ರಿಲ್ 2012ರಲ್ಲಿ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬಂದಿತು. ಆ ಸಮಯದಲ್ಲಿ ನಾಗರಿಕರ ವಿವಿಧ ಸೇವೆಗಳನ್ನು ಪೂರೈಸುವ 11 ಇಲಾಖೆಗಳು ಹಾಗೂ 151 ಸೇವೆಗಳನ್ನು ಒಳಗೊಂಡಿದ್ದು ಸಕಾಲ ಇಂದು 95 ಇಲಾಖೆಗಳೊಂದಿಗೆ 1025 ಸೇವೆಗಳನ್ನು ಒಳಗೊಂಡಿದೆ ಎಂದರು.
ಅವರು ವಿವಿಧ ಇಲಾಖೆಗಳಲ್ಲಿ ಸೇವೆಯನ್ನು ಪಡೆಯ ಬಯಸುವ ನಾಗರಿಕರು ಸಂಬಂಧಿತ ದಾಖಲೆಗಳು ಮತ್ತು ನಿಗದಿಪಡಿಸಿರುವ ಶುಲ್ಕದೊಂದಿಗೆ ಅರ್ಜಿನ್ನು ಆನ್‍ ಲೈನ್‍ ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ರಸೀದಿಯನ್ನು ಆನ್‍ ಲೈನ್‍ನಲ್ಲಿ ಪಡೆಯಬಹುದು. ಅರ್ಜಿದಾರರು ತಮ್ಮ ಅರ್ಜಿಯ ಪ್ರಗತಿಯನ್ನು ಮೊಬೈಲ್ ಮೂಲಕ ಎಸ್‍ಎಂಎಸ್‍ನಲ್ಲಿ ಪಡೆಯಬಹುದು ಎಂದು ತಿಳಿಸಿದರು.
ಗ್ರಾಹಕರಿಗೆ ನಾಗರಿಕ ಸೇವೆಯನ್ನು ಒದಗಿಸುವಲ್ಲಿ ವಿಳಂಬವಾದಲ್ಲಿ ವಿಳಂಬಿತ ಅವಧಿಯಲ್ಲಿ ಪ್ರತಿದಿನಕ್ಕೆ ರೂ. 20ರಂತೆ ಗರಿಷ್ಠ ರೂ. 500 ಗಳ ಮಿತಿಯವರೆಗೆ ಸಂಬಂಧಿತ ಸರ್ಕಾರಿ ನೌಕರರು ಅರ್ಜಿಸಲ್ಲಿಸಿದ ಸಾರ್ವಜನಿಕರಿಗೆ ಪರಿಹಾರ ಶುಲ್ಕವನ್ನು ನೀಡಬೇಕಾಗುತ್ತದೆ ಎಂದು ಸಕಾಲದ ಬಗೆಗಿನ ಹೆಚ್ಚಿನ ವಿವರಗಳನ್ನು ಪಿ.ಪಿ.ಟಿ. ಯಲ್ಲಿ ತಾಂತ್ರಿಕ ಮಂಡನೆಯನ್ನು ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ಆರ್. ಜಯಕುಮಾರಿ ಅವರು ಮಾತನಾಡಿ, ಸಕಾಲದ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕೆಂದು ಸಲಹೆ ನೀಡಿ, ಸಕಾಲದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟ ಸುಧಾ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ವಿಭಾಗದ ಸೂಪರಿಂಟೆಂಡೆಂಟ್ ಆದ ಅನುರಾಧ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್. ಶ್ರೀಧರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: