ಮೈಸೂರು

ನಂಜನಗೂಡಿಗೆ ಹೋಗುವ ಮಾರ್ಗದಲ್ಲಿ ಸಿಗುವ ವರುಣಾ ಚಾನಲ್ ಮೇಲ್ಸೇತುವೆ ದುರಸ್ತಿ ಕಾರ್ಯ ನಡೆಸಲು ಒತ್ತಾಯ

ಮೈಸೂರು,ಡಿ.22:- ನಂಜನಗೂಡಿಗೆ ಹೋಗುವ ಮಾರ್ಗದಲ್ಲಿ ಸಿಗುವ ವರುಣಾ ಚಾನಲ್ ಮೇಲ್ಸೇತುವೆ ದುರಸ್ತಿ ಕಾರ್ಯ ಕೂಡಲೇ ಮಾಡದಿದ್ದರೆ ಜನರ ಮೈ ಮೇಲೆ ಕಳಚಿ ಬೀಳುವ ಸಂಭವವೇ ಹೆಚ್ಚಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಜನರ ಪ್ರಾಣಕ್ಕೆ ಸಂಚಕಾರವಾಗುವ ಪರಿಸ್ಥಿತಿ ಇದೆ. ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಅರಸು ಅವರ ಕನಸಿನ ಕೂಸಾಗಿದ್ದ ವರುಣಾ ನಾಲೆ ನಿರ್ಮಾಣಕ್ಕೆ 1979 ರಲ್ಲಿ ಚಾಲನೆ ನೀಡಲಾಗಿತ್ತು. ಕಾಲುವೆಯ ಮೈಸೂರು , ಟಿ.ನರಸೀಪುರ ,ಹೆಚ್.ಡಿ ಕೋಟೆ , ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕುಗಳು ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕುಗಳಿಗೆ ಅನುಕೂಲವಾಗಿದೆ. 135 ಕಿ.ಮೀ (84 ಮೈಲಿ) ವಿಸ್ತಾರದಲ್ಲಿ 80,000 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ. 2015 ರಲ್ಲಿ ನೀರು ಸೋರಿಕೆಯಾಗುತ್ತಿದ್ದಾಗ ವರುಣಾ ಕಾಲುವೆ ನಿರ್ವಾಹಕ ವಿಭಾಗ , ಕಾವೇರಿ ನಿಗಮ ನಿಯಮಿತ ದಿಂದ ಚಾನಲ್ ಮೇಲ್ಸೇತುವೆ ನೀರಿನ ಸೋರಿಕೆ ತಡೆಯಲು ಬಿರುಕುಗಳನ್ನು ಪಾಲಿಮರ್ ತಂತ್ರಜ್ಞಾನದಿಂದ ಸರಿಪಡಿಸಲು 3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿತ್ತು. ಆದರೆ ಕೇವಲ ಐದು ವರ್ಷದಲ್ಲಿ ಮತ್ತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನಂಜನಗೂಡಿಗೆ ಹೋಗುವ ಮಾರ್ಗದಲ್ಲಿ ರಸ್ತೆಗೆ ಸಿಗುವ ಈ ವರುಣಾ ಚಾನಲ್ ಮೇಲ್ಸೇತುವೆ ಮತ್ತೆ ಸೋರಿಕೆಯಾಗುತ್ತಿದೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ತಕ್ಷಣ ಸಂಬಂಧಪಟ್ಟ ಇಲಾಖೆಯವರು ಇದಕ್ಕೆ ಶಾಶ್ವತ ಪರಿಹಾರ ಕಂಡು ಕೊಂಡು ದೇವರಾಜ ಅರಸು ಅವರ ಕನಸಿನ ಕೂಸಾಗಿರುವ ವರುಣಾ ಚಾನಲ್ ಮೇಲ್ಸೇತುವೆ ದುರಸ್ತಿ ಕಾಮಗಾರಿ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: