ಕರ್ನಾಟಕಪ್ರಮುಖ ಸುದ್ದಿ

ಪ.ಜಾತಿ.ಪಂ ಸರ್ಕಾರಿ ನೌಕರರಿಗೆ ಬಡ್ತಿ ವಿಷಯ : ಸಮಸ್ಯೆ ನಿವಾರಣೆಗೆ ಶಾಶ್ವತ ಸಮಿತಿ ರಚಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ

ರಾಜ್ಯ(ಬೆಂಗಳೂರು)ಡಿ.22:- ಪರಿಶಿಷ್ಟ ಜಾತಿ ಮತ್ತು ಪಂಗಡದ ಸರಕಾರಿ ನೌಕರರಿಗೆ ಬಡ್ತಿ ನೀಡುವ ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ವಿಷಯದಲ್ಲಿ ಉಂಟಾಗಿರುವ ಸಮಸ್ಯೆಗಳ ನಿವಾರಣೆಗೆ ಹಿರಿಯ ಸಚಿವರ ನೇತೃತ್ವದಲ್ಲಿ ಶಾಶ್ವತ ಸಮಿತಿ ರಚಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಪರಿ ಶಿಷ್ಟ ಜಾತಿ ಪತ್ತು ಪಂಗಡದ ನೌಕರರ ಸಂಘದ ಪದಾಧಿಕಾರಿಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಅನ್ಯಾಯಕ್ಕೆ ಒಳಗಾಗಿರುವ ನೌಕರರ ಹಿತ ಕಾಪಾಡುವಂತೆ ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಬಡ್ತಿ ವಿಚಾರವು ಅನೇಕ ವರ್ಷಗಳಿಂದ ಬಿಡಿಸಲಾಗದ ಸಮಸ್ಯೆಯಾಗಿತ್ತು. ಹಿಂದೆ ಇದ್ದ ಕಾಯ್ದೆಗಳಲ್ಲಿನ ಕೆಲವು ನ್ಯೂನ್ಯತೆಗಳಿಂದಾಗಿ ನ್ಯಾಯಾಲಯಗಳೂ ಸಹ ಈ ಸಮಸ್ಯೆಯನ್ನು ಪರಿಹರಿಸಲು ದಶಕಗಟ್ಟಲೆ ಕಾಲಾವಧಿ ತೆಗೆದುಕೊಂಡಿದ್ದವು. ಕಡೆಗೆ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ಹಿಂಬಡ್ತಿ ಹೊಂದುವ ಭೀತಿಯಿಂದ ಸುಮಾರು 15 ಕ್ಕೂ ಹೆಚ್ಚು ಜನ ಈ ವರ್ಗಗಳ ನೌಕರರು ಆತ್ಮಹತ್ಯೆ ಮಾಡಿಕೊಂಡರು ಮತ್ತು ಅನ್ಯಾಯದ ಸಾವಿಗೀಡಾದರು ಎಂದು ಬೇಸರವ್ಯಕ್ತಪಡಿಸಿದರು.
ಈ ವರ್ಗಗಳ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ 2017 ರಲ್ಲಿ ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬಡ್ತಿ ಸಂರಕ್ಷಣಾ ಕಾಯ್ದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಗೆ ರಾಷ್ಟ್ರಪತಿಗಳೂ ಅಂಕಿತ ಹಾಕಿದರು. ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವೂ ಈ ಕಾಯ್ದೆಯನ್ನು ಎತ್ತಿ ಹಿಡಿಯಿತು. ಇದರಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ನೌಕರರು ತುಸುಮಟ್ಟಿಗೆ ನಿರಾಳವಾದರು. ಆದರೆ, ಪ್ರಸ್ತುತ ನಿಮ್ಮ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಾಗೂ ಹಿಂದುಳಿದ ವರ್ಗಗಳ ನೌಕರರ ಕುರಿತಾದ ನಿರ್ಲಕ್ಷ್ಯ ಧೋರಣೆಯಿಂದಾಗಿ ಮತ್ತು ಹಲವು ಇಲಾಖೆಗಳ ಅಧಿಕಾರಿಗಳ ಉದ್ಧಟತನದಿಂದಾಗಿ ಮತ್ತೆ ಅದೇ ರೀತಿಯ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
ಮುಖ್ಯವಾಗಿ ಲೋಕೋಪಯೋಗಿ, ಜಲಸಂಪನ್ಮೂಲ, ಅಬಕಾರಿ, ಪೊಲೀಸ್, ಅರಣ್ಯ ಸಾರಿಗೆ, ನಗರಾಭಿವೃದ್ಧಿ, ಔಷಧ ನಿಯಂತ್ರಣ, ಕೆಪಿಟಿಸಿಎಲ್, ಅಗ್ನಿ ಶಾಮಕ, ಕೃಷಿ, ಶಿಕ್ಷಣ ಮುಂತಾದ ಇಲಾಖೆಗಳಲ್ಲಿ ಕಿರಿಯರಿಗೆ ಬಡ್ತಿ ನೀಡಿ, ಹಿರಿಯರನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಉದಾಹರಣೆಗೆ ಜಲಸಂಪನ್ಮೂಲ ಇಲಾಖೆಯಲ್ಲಿ 2009 ರಲ್ಲಿ ನೇಮಕವಾದವರನ್ನು ಬಿಟ್ಟು 2003 ಮತ್ತು 2007 ರ ಬ್ಯಾಚ್ಗಳಲ್ಲಿ ನೇಮಕಗೊಂಡ ಎಂಜಿನಿಯರುಗಳಿಗೆ ಬಡ್ತಿ ನೀಡಲಾಗಿದೆ. ಈ ರೀತಿಯ ಹಲವು ಸಮಸ್ಯೆಗಳು ಉದ್ಭವವಾಗಿವೆ. ನೇರ ನೇಮಕಾತಿ ಆದವರಿಗೆ ಮತ್ತು ಬ್ಯಾಕ್ಲಾಗ್ ಮೂಲಕ ನೇಮಕಾತಿ ಆದವರಿಗೂ ಹಲವು ಸಮಸ್ಯೆಗಳಿವೆ. ಪ.ಜಾತಿ, ಪ.ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳು ನೇಮಕಾತಿಯಲ್ಲಿ ಮೆರಿಟ್ನ ಕಾರಣಕ್ಕೆ ಸಾಮಾನ್ಯ ಕೋಟಾದಡಿ ಆಯ್ಕೆ ಆಗಿದ್ದರೆ ಅಂತವರಿಗೆ ಬಡ್ತಿ ನಿರಾಕರಿಸುವುದು ಅಸಂವಿಧಾನಿಕ ವರ್ತನೆಯಾಗುತ್ತದೆ ಎಂದು ಹೇಳಿದ್ದಾರೆ.
ಆದ್ದರಿಂದ, ಸ್ವತಃ ಮುಖ್ಯಮಂತ್ರಿಗಳೇ ಈ ಕುರಿತು ಗಮನ ಹರಿಸಬೇಕಾದ ಅಗತ್ಯವಿದೆ. ಈ ವರ್ಗಗಳ ನೌಕರರ ಸಮಸ್ಯೆಗಳ ನಿವಾರಣೆಗೋಸ್ಕರವೇ ಸರ್ಕಾರದ ಮಟ್ಟದಲ್ಲಿ ಹಿರಿಯ ಸಚಿವರ ಮುಂದಾಳತ್ವದಲ್ಲಿ ಶಾಶ್ವತ ಸಮಿತಿಯೊಂದನ್ನು ರಚಿಸಿ, ಕಾಲ ಕಾಲಕ್ಕೆ ಉದ್ಭವವಾಗುವ ಸಮಸ್ಯೆಗಳನ್ನು,ಪ್ರಸ್ತುತ ಉದ್ಭವವಾಗಿರುವ ಸಮಸ್ಯೆಗಳ ಕುರಿತು ಪ.ಜಾತಿ, ಪ.ಪಂಗಡಗಳ ನೌಕರರ ಸಂಘದ ಪದಾಧಿಕಾರಿಗಳ ಸಭೆಯನ್ನು ತುರ್ತಾಗಿ ಕರೆದು ಸಹಾನುಭೂತಿಯಿಂದ ಪರಿಶೀಲಿಸಿ ಅನ್ಯಾಯಕ್ಕೊಳಗಾಗಿರುವ ನೌಕರರ ಹಿತರಕ್ಷಣೆಯನ್ನು ರಕ್ಷಿಸಬೇಕು ಮತ್ತು ಬಾಕಿ ಇರುವ ಎಲ್ಲಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: