ಕರ್ನಾಟಕಮೈಸೂರು

ಪ್ರಗತಿಪರ ಸಂಘಟನೆಗಳಿಂದ ಮಹಿಷ ದಸರಾಗೆ ಚಾಲನೆ

ಮಹಿಷಾಸುರ ನಮ್ಮ ಪೂರ್ವಜ, ಅವನು ರಾಕ್ಷಸನಲ್ಲ. ರಕ್ಷಕನಾಗಿದ್ದ ಆತನನ್ನು ಅಸುರನಂತೆ ಚರಿತ್ರೆಯಲ್ಲಿ ಬಣ್ಣಿಸಲಾಗಿದೆ. ಅಸುರ ಎಂದರೆ ರಾಕ್ಷಸ, ವಿಕಾರಿ, ಕ್ರೂರ ಎನ್ನುವ ಕಲ್ಪನೆಯನ್ನು ಬೆಳೆಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ತಿಳಿಸಿದರು.

ಅವರು ಕರ್ನಾಟಕ ರಾಜ್ಯ ದಲಿತ ವೆಲ್ ಫೇರ್ ಟ್ರಸ್ಟ್ ಆಶೋಕಪುರಂ ಅಭಿಮಾನಿಗಳ ಬಳಗ, ರಾಜ್ಯ ಹಿಂದುಳಿದ ವರ್ಗಗಳ ಸಂಘ, ಮೈಸೂರು ವಿವಿ ಸಂಶೋಧಕರ ಸಂಘ, ವಿವಿ ದಲಿತ ವಿದ್ಯಾರ್ಥಿಗಳ ಒಕ್ಕೂಟ, ರಾಜ್ಯ ಕೂಲಿಕಾರರ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಚಾಮುಂಡಿ ಬೆಟ್ಟದಲ್ಲಿ ಸೆ.29ರಂದು ಮಹಿಷಾ ದಸರಾಗೆ ಚಾಲನೆ ನೀಡಿ ಮಾತನಾಡಿ, ಬಿ.ಆರ್. ಅಂಬೇಡ್ಕರ್ ಇಲ್ಲದಿದ್ದರೆ ದಲಿತರು, ಶೋಷಿತರು ಇತಿಹಾಸವನ್ನು ತಿರುಗಿ ನೋಡುತ್ತಿರಲಿಲ್ಲ. ಶೂದ್ರರು ಸತ್ಯವನ್ನು ಅರಿತು ಸಂಸ್ಕೃತಿಯನ್ನು ರಕ್ಷಿಸಬೇಕು ಎಂದರು.

ನಾಡಹಬ್ಬ ದಸರಾಗೂ ಮುನ್ನ ನಗರದಲ್ಲಿ ಮಹಿಷ ದಸರಾವನ್ನು ಕಳೆದೆರಡು ವರ್ಷಗಳಿಂದ ಆಚರಿಸಲಾಗುತ್ತಿದೆ. ಮುಖಂಡರು ಮಹಿಷಾಸುರನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜೈಕಾರ ಕೂಗಿ ಮಹಿಷ ದಸರಾಗೆ ಚಾಲನೆ ನೀಡಿದರು. ಸಿದ್ದಸ್ವಾಮಿ ವಿರಚಿತ ‘ಪ್ರಾಚೀನ ಅಸುರ ರಾಷ್ಟ್ರ’ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು

ಕೃತಿ ಕುರಿತು ಮಾತನಾಡಿದ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ನಮ್ಮವರು ಎಂದರೆ ದೈವಾಂಶ ಸಂಭೂತರು, ಪರರು ಎಂದರೆ ರಾಕ್ಷಸರು ಎನ್ನುವ ಮನೋಭಾವನೆ ತೊಲಗಿ.  ಸಂಸ್ಕೃತಿ ಮತ್ತು ಬದುಕನ್ನು ಪುನರ್ ಕಲ್ಪಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇತಿಹಾಸವನ್ನು ಓದುವ ಮತ್ತು ಅರ್ಥೈಸುವ ರೀತಿಗಳು ಬದಲಾಗಬೇಕು ಎಂದು ಕರೆ ನೀಡಿದರು.

ಹೆಂಡವನ್ನು ಕುಡಿಯದವನು ಸುರರು, ಕುಡಿಯದಿದ್ದವನು ಅಸುರ, ಅಸುರ ಎಂದರೇ ರಾಕ್ಷಸ ಅಲ್ಲ, ಮಹಿಷ ಬುದ್ಧನ ಅನುಯಾಯಿ ಆದ್ದರಿಂದ ಆತನನ್ನು ‘ಮಹಿಷಾ ಗೌತಮ’  ಎಂದು ಕರೆಯುವೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ತಿಳಿಸಿದರು.

ಮಹಿಷಾ ದಸರಾ ಪ್ರಯುಕ್ತ ಅಶೋಕಪುರಂನ ಡಾ.ಬಿ.ಆರ್. ಅಂಬೇಡ್ಕರ್ ಪಾರ್ಕ್ ನಿಂದ ನಡೆದ ಬೈಕ್ ರ್ಯಾಲಿಗೆ ಶಾಸಕ ಎಂ.ಕೆ.ಸೋಮಶೇಖರ್ ಚಾಲನೆ ನೀಡಿದರು. 500ಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದಲಿತ ವೆಲ್ ಫರ್ ಟ್ರಸ್ಟ್ ಅಧ್ಯಕ್ಷ ಶಾಂತಕುಮಾರ್, ಮಾಜಿ ಮೇಯರ್ ಪುರುಷೋತ್ತಮ್ ಮತ್ತಿತರು ಹಾಜರಿದ್ದರು.

Leave a Reply

comments

Related Articles

error: