ದೇಶಪ್ರಮುಖ ಸುದ್ದಿ

ಕಾಂಗ್ರೆಸ್ ಪಾದಯಾತ್ರೆ ತಡೆದ ಪೊಲೀಸರು: ಪ್ರಿಯಾಂಕಾ ಸೇರಿ ಹಲವು ನಾಯಕರು ವಶಕ್ಕೆ

ನವದೆಹಲಿ,ಡಿ.24-ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಜಾರಿಯನ್ನು ತಡೆಹಿಡಿಯಲು ಕೂಡಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಲು ಕಾಂಗ್ರೆಸ್ ನಿಯೋಗ ಇಂದು ರಾಷ್ಟ್ರಪತಿ ಭವನಕ್ಕೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ದೆಹಲಿ ಪೊಲೀಸರು ತಡೆಹಿಡಿದಿದ್ದಾರೆ.

ದೆಹಲಿಯ ವಿಜಯ್ ಚೌಕ್‌ನಿಂದ ಹೊರಟ ಕಾಂಗ್ರೆಸ್ ಪಾದಯಾತ್ರೆಯನ್ನು ತಡೆದ ದೆಹಲಿ ಪೊಲೀಸರು, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.

ಕೇಂದ್ರ ಸರಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯ ಗಡಿ ಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 29ನೇ ದಿನಕ್ಕೆ ಕಾಲಿಟ್ಟಿದೆ. ಈ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಧ್ಯ ಪ್ರವೇಶವನ್ನು ಕೋರಿ ಕಾಂಗ್ರೆಸ್ ನಿಯೋಗವು ರಾಷ್ಟ್ರ ಭವನದತ್ತ ಕಾಲ್ನಾಡಿಗೆ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡು ಕೋಟಿ ಹಸ್ತಾಕ್ಷರವಿರುವ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಕಾಂಗ್ರೆಸ್‌ನ ಸಂಸದರು ಸೇರಿದಂತೆ ಪ್ರಮುಖ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತಲ್ಲದೇ, ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಪ್ರತಿಭಟನೆ, ಪಾದಯಾತ್ರೆ ಹಮ್ಮಿಕೊಳ್ಳುವುದು ನಮ್ಮ ಪ್ರಜಾಸತ್ತಾತ್ಮಕ ಹಕ್ಕು ಎಂದ ಪ್ರಿಯಾಂಕಾ ಗಾಂಧಿ, ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: