ಮೈಸೂರು

ಕೊರೊನಾ ಹಿನ್ನೆಲೆ : ಹೊಸ ವರ್ಷ ಆಚರಣೆ ಇಲ್ಲ : ಡಿಸಿ ರೋಹಿಣಿ ಸಿಂಧೂರಿ

ಮೈಸೂರು,ಡಿ.24:- ಕೊರೊನಾ ರೂಪಾಂತರದ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಹೊಸ ವರ್ಷಾಚರಣೆ ಇಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಅರಮನೆ ದೀಪಾಲಂಕಾರ, ಬಾಣಬಿರುಸು ಪ್ರದರ್ಶನವೂ ಇರುವುದಿಲ್ಲ. ರೂಪಾಂತರಗೊಂಡ ಕೊರೊನಾ ಬಗ್ಗೆ ಜಿಲ್ಲಾಡಳಿತ ಕ್ರಮವಹಿಸಿದೆ. ಹೊಸ ವರ್ಷದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನವು ಇರುವುದಿಲ್ಲ. ಉಳಿದ ಕಾರ್ಯಕ್ರಮಗಳ ಬಗ್ಗೆಯೂ ಎಚ್ಚರ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಹೊಸ ವರ್ಷದ ದಿನ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸುವ ಬಗ್ಗೆ ಚಿಂತನೆ ಮಾಡುತ್ತೇವೆ. ನಾಳೆ ಏಕಾದಶಿ ಕಾರಣ ದೇವಾಲಯ ಮುಚ್ಚಲು ಆದೇಶ ನೀಡಲು ಸಾಧ್ಯವಿಲ್ಲ. ಆದರೆ, ಕೋವಿಡ್ ನಿಯಮ ಪಾಲಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ರೂಪಾಂತರಗೊಂಡ ಕೊರೊನಾ ಬಗ್ಗೆ ಪ್ರತಿಕ್ರಿಯಿಸಿ, ಬ್ರಿಟನ್‌ನಿಂದ ಬಂದವರ ಮಾಹಿತಿ ಪತ್ತೆಯಾಗಿದೆ. 137 ಮಂದಿ ಬ್ರಿಟನ್‌ನಿಂದ ಬಂದಿದ್ದಾರೆ. ಅದರಲ್ಲಿ ಡಿ.21ರಂದು 18 ಮಂದಿ ಆಗಮಿಸಿದ್ದರು. 18 ಮಂದಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಉಳಿದ 119 ಮಂದಿಯ ಪರೀಕ್ಷೆಯನ್ನು ಮಾಡುತ್ತಿದ್ದೇವೆ. ಹೊಸ ವೈರಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಆದರೆ, ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಿದೆ ಅಂತಷ್ಟೆ ಗೊತ್ತಾಗಿದೆ. ಇದಕ್ಕಾಗಿ ಎಲ್ಲ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: