ಮೈಸೂರು

ವೈಕುಂಠ ಏಕಾದಶಿ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ : ಭಕ್ತರ ಸಂಖ್ಯೆ ವಿರಳ

ಮೈಸೂರು,ಡಿ.25:- ಇಂದು ವೈಕುಂಠ ಏಕಾದಶಿ. ವೈಕುಂಠ ಏಕಾದಶಿಯಂದು ವೈಶಿಷ್ಟ್ಯವಾದ ವೈಕುಂಠ ದ್ವಾರ (ಉತ್ತರ ದ್ವಾರ) ದ ಮೂಲಕ ಲಕ್ಷ್ಮಿ ನಾರಾಯಣ, ವೆಂಕಟರಮಣ ದೇವರ ದರ್ಶನ ಪಡೆದರೆ ಸದ್ಗತಿ ದೊರೆಯಲಿದೆ ಎಂಬ ನಂಬಿಕೆ ಭಕ್ತರದ್ದು. ಅದಕ್ಕಾಗಿ ಪ್ರತಿವರ್ಷವೂ ಸಹಸ್ರಾರು ಭಕ್ತರು ದೇವಸ್ಥಾನಗಳಲ್ಲಿ ಸೇರುತ್ತಿದ್ದರು. ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿದೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಪೂಜೆ ನಡೆಯಿತು. ಆಶ್ರಮದ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಏಕಾದಶಿ ಹಿನ್ನೆಲೆ ವೆಂಕಟೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆ ಪೂಜೆಯಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಾಗಿಯಾಗಿದ್ದರು.
ದೇವಾಲಯದ ಉತ್ತರ ದ್ವಾರದಲ್ಲಿ ಸ್ವರ್ಗದ ಭಾಗಿಲು ಸ್ಥಾಪನೆ ಮಾಡಲಾಗಿದ್ದು, ಕೊರೋನಾ ಹಿನ್ನೆಲೆ ಭಕ್ತರಿಗೆ ಗೈಡ್ಲೈನ್ ನೀಡಲಾಗಿತ್ತು. ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದಿಕೊಂಡು ಬಂದು ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ದತ್ತವೆಂಕಟೇಶ್ವರ ದೇವಾಲಯದಲ್ಲಿ ಶೇಷವಾಹನ ಅಲಂಕಾರ. ವೆಂಕಟೇಶ್ವರನಿಗೆ ವಿಷ್ಣುವಿನ ಅವತಾರದ ಅಲಂಕಾರ ಮಾಡಲಾಗಿದೆ.
ಮೈಸೂರು ಊಟಿ ರಸ್ತೆಯಲ್ಲಿರುವ ದತ್ತವೆಂಕಟೇಶ್ವರ ದೇವಾಲಯ ಆವರಣದಲ್ಲಿ ಸರಳವಾಗಿ ಚಪ್ಪರದಿಂದ ವೈಕುಂಠದ್ವಾರ ನಿರ್ಮಾಣ ಮಾಡಲಾಗಿದೆ. ಸರತಿ ಸಾಲಿನಲ್ಲಿ ಆಗಮಿಸಿದ ಭಕ್ತರು ವೆಂಕಟೇಶ್ವರನ ದರ್ಶನ ಪಡೆದರು. ಯಾವುದೇ ಪ್ರಸಾದ ವಿತರಣೆ ಇರಲಿಲ್ಲ. ಯೋಗಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿಯೂ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ನಗರದಲ್ಲಿರುವ ವಿಷ್ಣುವಿನ ದೇವಾಲಯ, ಆಂಜನೇಯನ ದೇವಾಲಯ, ಶಿವನ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: