ಮೈಸೂರು

ಮಹಿಳೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಅಪಹರಣ

ಮೈಸೂರು,ಡಿ.26:- ಮಹಿಳೆಯೋರ್ವರ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ ಘಟನೆ ಸರಸ್ವತಿಪುರಂನಲ್ಲಿ ನಡೆದಿದೆ.
ಕೆ.ಜಿ.ಕೊಪ್ಪಲು ನಿವಾಸಿ ಗೋವಿಂದಪ್ಪ ಅವರ ಪತ್ನಿ ಈರಮ್ಮ ಎಂಬವರೇ ಸರ ಕಳೆದುಕೊಂಡವರಾಗಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ನಿನ್ನೆ ಬೆಳಿಗ್ಗೆ ಸರಸ್ವತಿಪುರಂನಲ್ಲಿರುವ ಶ್ರೀಚಂದ್ರಮೌಳೇಶ್ವರ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಕೆಟಿಎಂ ಬೈಕಿನಲ್ಲಿ ಬಂದ ಯುವಕರಿಬ್ಬರು ಸರಸ್ವತಿಪುರಂ ಒಂದನೇ ಮೇನ್ ನಲ್ಲಿ ಈರಮ್ಮ ಅವರ ಕಣ್ಣಿಗೆ ಖಾರದ ಪುಡಿ ಎರಚಿದ್ದು ಅವರ ಕೊರಳಿನಲ್ಲಿದ್ದ 35ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸರಸ್ವತಿಪುರಂ ಪೊಲೀಸ್ ಠಾಣಾ ಇನ್ಸಪೆಕ್ಟರ್ ತಿಮ್ಮರಾಜು ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿದರು. ಕೆಲವೆಡೆ ಅಳವಡಿಸಿರುವ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳಿಬ್ಬರು ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿದ್ದು, ಹಿಂಬದಿ ಸವಾರ ಕೇವಲ ಮಾಸ್ಕ್ ಮಾತ್ರ ಧರಿಸಿದ್ದ ಎನ್ನಲಾಗಿದೆ. ಸದಾ ಜನರಿರುವ ಒಂದನೇ ಮೇನ್ ನಲ್ಲಿ ಕಳ್ಳತನ ಕೃತ್ಯ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣಾ ಇನ್ಸಪೆಕ್ಟರ್ ಪ್ರಕರಣ ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: