ಮೈಸೂರು

ಬಿಸಿಲ ಬೇಗೆಗೆ ಆನೆ ಸಾವು

ರಾಮನಗರ: ಸುಮಾರು 15 ವರ್ಷದ ಆನೆಯೊಂದು ಬಿಸಿಲ ಬೇಗೆಗೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ದೇವೀರಮ್ಮನದೊಡ್ಡಿ ಗ್ರಾಮದ ಬಳಿ ನಡೆದಿದೆ.

ಗ್ರಾಮದ ಕೃಷ್ಣೇಗೌಡ ಎಂಬವರ ತೋಟದ ಬಳಿ ನೀರು ಕುಡಿದು ನಿತ್ರಾಣಗೊಂಡು ಆನೆ ಬಿದ್ದಿತ್ತು. ಬೆಳಗ್ಗೆ ಕೃಷ್ಣೆಗೌಡರು ತೋಟಕ್ಕೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ನೀಲಗಿರಿ ತೋಪಿನಲ್ಲಿ ನಿತ್ರಾಣವಾಗಿ ಬಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆನೆಯನ್ನು ಕಂಡು ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಕಾವೇರಿ ವನ್ಯಜೀವಿ ಧಾಮದ ಅಧಿಕಾರಿಗಳು ಸ್ಥಳೀಯ ಪಶುವೈದ್ಯರನ್ನು ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಿದರು.ಆನೆ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ತಜ್ಞವೈದ್ಯರ ತಂಡ, ಆನೆಗೆ ನೀರು ಮಿಶ್ರಿತ ಗ್ಲೂಕೋಸ್ ಹಾಗೂ ಡ್ರಿಪ್ಸ್ ಹಾಕಿದರು. ಅಲ್ಲದೇ ನಿತ್ರಾಣಗೊಂಡಿದ್ದ ಆನೆಗೆ ಬಾಳೆಹಣ್ಣು ಹಾಗೂ ಹುಲ್ಲು ತಿನ್ನಿಸುವ ಯತ್ನವನ್ನು ಸಹ ನಡೆಸಲಾಯಿತು. ಆದರೆ ಆನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಜಿಲ್ಲೆಯಲ್ಲಿ ಗರಿಷ್ಠ 39 ಡಿಗ್ರಿ ತಾಪಮಾನವಿದ್ದು, ಬಿಸಿಲಿನ ಝಳದಿಂದ ಇದೀಗ ಕಾಡು ಪ್ರಾಣಿಗಳು ಸಹ ಸಾವನ್ನಪ್ಪುತ್ತಿವೆ. ಕಾಡಾನೆ ಸಿದ್ದನ ನೆನಪು ಮಾಸುವ ಮುನ್ನವೇ ಮತ್ತೊಂದು ಆನೆ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಸಾವನ್ನಪ್ಪಿರುವುದು ಪ್ರಾಣಿಪ್ರಿಯರಲ್ಲಿ ಆತಂಕವನ್ನುಂಟು ಮಾಡಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: