ಕರ್ನಾಟಕಪ್ರಮುಖ ಸುದ್ದಿ

ಎಸ್.ಎಲ್.ಧರ್ಮೇಗೌಡರ ಸಾವು `ರಾಜಕೀಯದ ಕೊಲೆ’: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪ

ಬೆಂಗಳೂರು,ಡಿ.29- ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡರ ಸಾವು `ರಾಜಕೀಯದ ಕೊಲೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇಂದು ಬೆಂಗಳೂರಿನ ಜೆ.ಪಿ.ನಗರದಲ್ಲಿ ತಮ್ಮ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಣ್ಣನ ಸಾವು ಆತ್ಮಹತ್ಯೆ ಅಂತ ಹೇಳಲ್ಲ, ಇವತ್ತು ನಡೆದಿರುವ ರಾಜಕೀಯದ ಕೊಲೆ ಇದು. ಈ ಘಟನೆ ಸಹಿಸಿಕೊಳ್ಳಲು ಸಾಧ್ಯ ಇಲ್ಲ. ಧರ್ಮೇಗೌಡ ನನ್ನ ಒಡಹುಟ್ಟಿದ ಸೋದರನಂತೆ. ನನ್ನ ಜೀವನದಲ್ಲಿ ಮರೆಯಲು ಆಗದ ಅತ್ಯಂತ ದುರಂತ ದಿ‌ನ ಇದು. ನನ್ನ ಕುಟುಂಬದ ಒಡಹುಟ್ಟಿದವನ ಮರಣವಿದು ಎಂದು ಕಣ್ಣೀರು ಹಾಕಿದರು.

ಅವರ ತಂದೆ ನನಗೆ ಒಂದು ಮಾತು ಹೇಳಿದ್ದರು, ನಾನಂತೂ ಮಂತ್ರಿ ಆಗಲಿಲ್ಲ, ನಾನು ಬದುಕಿರುವಾಗಲೇ ನನ್ನ ಪುತ್ರ ಮಂತ್ರಿ ಆಗಬೇಕೆಂದಿದ್ದರು. ಆದರೆ ಮಂತ್ರಿ ಆಗಲಿಲ್ಲ, ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ಗೆ ಹೋಗಲು ನಿರ್ಧರಿಸಿದ್ದರು. ಆಗ ನಾನು ಹೆಚ್ ಡಿಕೆ ಬೇಕಾ, ಎಂಎಲ್ ಎ ಸ್ಥಾನ ಬೇಕಾ ಎಂದು ಕೇಳಿದ್ದೆ, ಆ ಮಾತು ಕೇಳಿ ಅವರು ತಮ್ಮ ನಿರ್ಧಾರ ಬದಲಿಸಿ ಜೆಡಿಎಸ್ ನಲ್ಲಿಯೇ ಉಳಿದುಕೊಂಡರು. ಧರ್ಮಣ್ಣ ಅವರ ತಂದೆಯ ಕನಸನ್ನು ನನಸಾಗಿಸಲು ಉಪಸಭಾಪತಿಯಾದ್ರು ಮಾಡೋಣ ಅಂತ ಮಾಡಿದೆ. ಉಪ ಸಭಾಪತಿ ಮಾಡಿದ್ದೆ ತಪ್ಪಾಯ್ತೇನೊ ಎಂಬ ಭಾವ ನನ್ನನ್ನೀಗ ಕಾಡತೊಡಗಿದೆ ಎಂದರು.

ಮನುಷ್ಯ ಇವತ್ತು ಆತ್ಮಹತ್ಯೆ ಮಾಡಿಕೊಂಡಿಲ್ಲ. ನಮ್ಮ ರಾಜಕೀಯದ ತೆವಲಿಗೆ ಇಂತವರ ಕೊಲೆ ಆಗ್ತಿದೆ. ಒಬ್ಬ ರಾಜಕೀಯ ಮುಖಂಡರು ದೇವೇಗೌಡರ ಸೆಕ್ಯುಲರಿಸಂ ಬಗ್ಗೆ ಪ್ರಶ್ನೆ ಮಾಡಿದ್ರು. ಅವತ್ತಿನ ಪರಿಷತ್ ಘಟನೆ ಬಗ್ಗೆ ನೀವು ಬಿಂಬಿಸುವ ಕೆಲಸ ಮಾಡಿದ್ರಿ. ಅದರ ಪರಿಣಾಮ ಇದು ಎಂದು ಹೇಳಿದರು.

ವಿಧಾನ ಪರಿಷತ್ ನಲ್ಲಿ ನಡೆದ ಘಟನಾವಳಿಗಳನ್ನು ನೆನೆದು ಧರ್ಮೇಗೌಡರು ನೊಂದಿದ್ದರು, ಅದನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದರು. ದೇವೇಗೌಡರು, ನಾನು ಇಬ್ಬರೂ ಅವರಿಗೆ ಧೈರ್ಯ ತುಂಬಿದ್ದೆವು. ಆದರೆ ಈಗ ನಮ್ಮನ್ನು ಅಗಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. (ಎಂ.ಎನ್)

Leave a Reply

comments

Related Articles

error: