ಮೈಸೂರು

ಸಾಂಸ್ಕೃತಿಕ ನಾಯಕ ಕುವೆಂಪು : ಡಾ. ಎಚ್.ಆರ್. ತಿಮ್ಮೇಗೌಡ

ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುವೆಂಪು ಅವರ 116ನೇ ಜನ್ಮ ದಿನಾಚರಣೆ

ಮೈಸೂರು,ಡಿ.30:- ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುವೆಂಪು ಅವರ 116 ಜನ್ಮ ದಿನಾಚರಣೆಯನ್ನು ಕನ್ನಡ ವಿಭಾಗದ ವತಿಯಿಂದ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕುವೆಂಪು ಅವರನ್ನು ಕುರಿತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ತಿಮ್ಮೇಗೌಡ ಅವರು ಮಾತನಾಡಿ, ಕುವೆಂಪು ನಮ್ಮ ಹೆಮ್ಮೆಯ ರಾಷ್ಟ್ರಕವಿ ಅವರು ಕನ್ನಡ ಸಾಹಿತ್ಯವನ್ನು ಮೇರು ಶಿಖರಕ್ಕೆ ಏರಿಸಿದ ಮಹಾನ್ ಚೇತನ. ನಮ್ಮ ತಲೆಮಾರನ್ನು ವೈಚಾರಿಕ ಅಂಗಳಕ್ಕೆ ಕರೆದೊಯ್ದ ಅದ್ಬುತ ವಿಚಾರವಂತ, ಅವರು ನೀಡಿರುವ ‘ವಿಶ್ವಮಾನವ’ ಸಂದೇಶ ವಿಶ್ವಕ್ಕೆ ಮಾದರಿಯಾಗಿದೆ. ಕುವೆಂಪು ಕೇವಲ ಸಾಹಿತಿ ಮಾತ್ರವಲ್ಲ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತನೆಯ ದಿಕ್ಕನ್ನೇ ಬದಲಿಸಿದ ಸಾಂಸ್ಕೃತಿಕ ನಾಯಕ. ಹೀಗಾಗಿ ಕರ್ನಾಟಕದಲ್ಲಿ ಕುವೆಂಪು ಒಂದು ವ್ಯಕ್ತಿನಾಮವಲ್ಲ, ಅದೊಂದು ಅಭಿಮಾನದ ಪ್ರತೀಕ, ಕರ್ನಾಟಕದ ಚರಿತ್ರೆಯಲ್ಲಿ ಕನ್ನಡದ ವಿವೇಕವನ್ನು ತಮ್ಮ ಬದುಕು ಮತ್ತು ಚಿಂತನೆಗಳಿಂದ ಶ್ರೀಮಂತಗೊಳಿಸಿದ ಮಾನವತಾವಾದಿ ಮಹಾಕವಿ ಕುವೆಂಪು. ಇಪ್ಪತ್ತನೆಯ ಶತಮಾನ ನಮ್ಮ ದೇಶಕ್ಕೆ ನೀಡಿದ ಮಹತ್ವದ ಕೊಡುಗೆಗಳಲ್ಲಿ ಕುವೆಂಪು ಕೂಡ ಒಬ್ಬರು, ಋಷಿಗಳಂತೆ ಬದುಕಿ, ಸಂತರಂತೆ ಬಾಳಿ, ಶಿವಶರಣರಂತೆ ನಡೆನುಡಿ ಒಂದಾಗಿ ಭಾರತದ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ಮರುಚಿಂತನೆಗೆ ಹಚ್ಚಿದವರು ಕುವೆಂಪು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ. ಬಿ. ಆರ್. ಜಯಕುಮಾರಿ ಮಾತನಾಡಿ, ಕುವೆಂಪು ಅವರು ವಿಶ್ವವಿದ್ಯಾನಿಲಯವಿದ್ದಂತೆ, ಅವರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ಅಧ್ಯಯನದ ಮೂಲಕ ಮೈಗೂಡಿಸಿಕೊಳ್ಳಬೇಕು. ಕುವೆಂಪು ಅವರಲ್ಲಿದ್ದ ಆಗಾಧವಾದ ಅದಮ್ಯ ಚೇತನ ಮತ್ತು ಸ್ತ್ರೀ ಸಂವೇದನೆ, ಆಧುನಿಕ ಕನ್ನಡ ಸಾಹಿತ್ಯ ಪರಂಪರೆಗೆ ಚರಿತ್ರಾರ್ಹ ಸಾಧನೆಯಾಗಿದೆ. ಅವರ ಸಾಹಿತ್ಯದ ವಿವಿಧ ಮಜಲುಗಳನ್ನು ಅಧ್ಯಯನ ಮಾಡುವುದರಿಂದ ನಮ್ಮ ವ್ಯಕ್ತಿತ್ವ ವಿಕಾಸವಾಗುತ್ತದೆಂದು ನುಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ತಿಮ್ಮೇಗೌಡ ಅವರು ಉಪನ್ಯಾಸ ನೀಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರಕಾಶ್ ಅವರು ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನಾಗೇಶ್ ಎಂ. ಅವರು ವಂದನಾರ್ಪಣೆ ಮಾಡಿದರು. ಬಸವರಾಜು ಅವರು ಪ್ರಾರ್ಥಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಾಪಕರು, ಅಧ್ಯಾಪಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: