ಮೈಸೂರು

ಶಾಲೆಗಳ ಪುನಾರಂಭ: ಮುಂಜಾಗೃತಾ ಕ್ರಮಗಳೊಂದಿಗೆ ಸಕಲ ಸಿದ್ಧತೆ ; ರೋಹಿಣಿ ಸಿಂಧೂರಿ

ಮೈಸೂರು. ಡಿ.31:- ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 6 ರಿಂದ 9 ತರಗತಿ ವರೆಗೆ ವಿದ್ಯಾಗಮ ಪುನಾರಂಭ ಮತ್ತು 10ನೇ ತರಗತಿಯನ್ನು ಜನವರಿ 1ರಿಂದ ಪ್ರಾರಂಭಿಸಲು ಮೈಸೂರು ಜಿಲ್ಲಾಡಳಿತ ಎಲ್ಲಾ ಕ್ರಮ ಕೈಗೊಂಡಿದ್ದು, ಆತಂಕ ಬೇಡ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.
ಕೋವಿಡ್ ವೈರಾಣು ದೇಶದಾದ್ಯಂತ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿಗೊಳಿಸಿದ ಕಾರ್ಯಸೂಚಿಯಂತೆ ನಡೆಸಲು ಸಾಧ್ಯವಾಗಿರುವುದಿಲ್ಲ. ಈ ಸಂಬಂಧ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿ ಸುತ್ತೋಲೆ ಹೊರಡಿಸಿದ್ದು, ಅದರಂತೆ ಮೈಸೂರು ಜಿಲ್ಲಾಡಳಿತ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 6 ರಿಂದ 10 ನೇ ತರಗತಿವರೆಗೆ ಒಟ್ಟು 2290 ಶಾಲೆಗಳಿದ್ದು, 208605 ವಿದ್ಯಾರ್ಥಿಗಳು ದಾಖಲಾಗಿದ್ದು 20088 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 6 ರಿಂದ 8ನೇ ತರಗತಿ ವರೆಗೆ 1576 ಶಾಲೆಗಳಿದ್ದು, 168495 ಮಕ್ಕಳು, 11893 ಶಿಕ್ಷಕರು ಇದ್ದಾರೆ. 9 ರಿಂದ 10ನೇ ತರಗತಿ 714 ಶಾಲೆಗಳಿದ್ದು, 40110 ಮಕ್ಕಳು, 8195 ಶಿಕ್ಷಕರು ಇದ್ದಾರೆ.
ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಹಾಗೂ ನಗರ ಪ್ರದೇಶಗಳಲ್ಲಿ ನಗರಪಾಲಿಕೆ/ನಗರಸಭೆ/ಪುರಸಭೆ ವತಿಯಿಂದ ಶಾಲೆಯ ಸುತ್ತಮುತ್ತಲಿನ ಪ್ರದೇಶ(200 ಮೀ ವ್ಯಾಪ್ತಿ), ಶಾಲಾವರಣ ಮತ್ತು ಶಾಲಾ ಶೌಚಾಲಯದ ನೈರ್ಮಲ್ಯ ಹಾಗೂ ಶಾಲೆಗಳ ಸ್ಯಾನಿಟೈಸೇಷನ್ ಕಾರ್ಯ ಮಾಡಲು ಸೂಚಿಸಲಾಗಿದೆ. ಹಾಗೆಯೇ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್‍ಗೆ ಅಗತ್ಯವಿರುವ ಥರ್ಮಲ್ ಸ್ಕ್ಯಾನರ್‍ಗಳ ವ್ಯವಸ್ಥೆಯನ್ನು ಮಾಡಿಕೊಡಲು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ.
ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ನಗರಪಾಲಿಕೆ, ನಗರಸಭೆ, ಪುರಸಭೆಗಳ ಆರೋಗ್ಯಾಧಿಕಾರಿಗಳು ಹಾಗೂ ಅವರ ಸಿಬ್ಬಂದಿಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳು ಮಾಸ್ಕ್ ಧರಿಸಿರುವ ಬಗ್ಗೆ, ಭೌತಿಕ ಅಂತರವನ್ನು ಕಾಪಾಡಿಕೊಂಡಿರುವ ಬಗ್ಗೆ, ಹಾಗೆಯೆ ವೈಯುಕ್ತಿಕ ಸ್ಯಾನಿಟೈಸರ್ ಬಳಕೆ ಮಾಡುವ ಬಗ್ಗೆ / ಕೈಗಳನ್ನು ಸೋಪಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳುವ ಬಗ್ಗೆ ಮೇಲ್ವಿಚಾರಣೆಮಾಡಲು ಹಾಗೂ ಆರೋಗ್ಯ ಸುರಕ್ಷತೆ ಮತ್ತು ವೈಯಕ್ತಿಕ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲು ಸೂಚಿಸಲಾಗಿದೆ. ಹಾಗೆಯೇ ಅನಾರೋಗ್ಯ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆಗೆ ಕ್ರಮವಹಿಸಲು ತಿಳಿಸಲಾಗಿದೆ. ಶಾಲಾ ಶಿಕ್ಷಕರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಕಡ್ಡಾಯಗೊಳಿಸಿಲಾಗಿದೆ ಹಾಗೂ ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭವಾಗಿರುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರು(ಆಡಳಿತ) ಇವರ ಮೂಲಕ ಜಿಲ್ಲೆಯ ಎಲ್ಲಾ ಬ್ಲಾಕ್‍ ಗಳ ಕ್ಷೇತ್ರಶಿಕ್ಷಣಾಧಿಕಾರಿಗಳು ಅವರ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಮುಖ್ಯಸ್ಥರ ಸಭೆಗಳನ್ನು ನಡೆಸಿ, ಸರ್ಕಾರದ ಸುತ್ತೋಲೆಯಂತೆ ಕ್ರಮಸಹಿಸಲು ಸೂಚಿಸಲಾಗಿದೆ. ಪೋಷಕರ ಸಭೆ ನಡೆಸಿ, ಮಕ್ಕಳು ವಿದ್ಯಾಗಮ ಕಾರ್ಯಕ್ರಮ ಅಥವಾ ಆನ್‍ ಲೈನ್ ತರಗತಿಗೆ ಒಪ್ಪಿಗೆ ಪತ್ರ ಪಡೆಯಲು ತಿಳಿಸಲಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಭೌತಿಕ ಅಂತರವನ್ನು ಕಾಪಾಡುವುದು, ವೈಯಕ್ತಿಕ ಸ್ಯಾನಿಟೈಸರ್ ಬಳಸುವುದು ಅಥವಾ ಸೋಪಿನಿಂದ ಕೈತೊಳೆಯುವುದು, ಮನೆಯಿಂದಲೇ ಕುಡಿಯಲು ನೀರು ತರುವಂತೆ ಸೂಚಿಸಲುತಿಳಿಸಲಾಗಿದೆ ಹಾಗೂ ಶಾಲೆಗಳಲ್ಲಿ ಕುಡಿಯಲು ಶುದ್ಧ ನೀರು ಅಥವಾ ಬಿಸಿನೀರಿನ ವ್ಯವಸ್ಥೆಯನ್ನು ಕೂಡ ಮಾಡಲು ತಿಳಿಸಲಾಗಿದೆ. ಆನ್‍ಲೈನ್ ತರಗತಿ ಅಪೇಕ್ಷಿಸುವ ವಿದ್ಯಾರ್ಥಿಗಳಿಗೂ ಕೂಡ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ‘ನಮ್ಮ ಶಾಲೆಯಿಂದ ಸೋಂಕು ಹರಡುವುದಿಲ್ಲ’ ಎಂಬಂತಹ ಫೋಷವಾಕ್ಯಗಳನ್ನು ಬರೆಸಿ, ಅಗತ್ಯ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮವಹಿಸುವಂತೆ ತಿಳಿಸಲಾಗಿದೆ.
ಶಾಲೆಗಳಲ್ಲಿ ಶೌಚಾಲಯಗಳನ್ನು, ಶಾಲಾವರಣವನ್ನು, ಶಾಲಾ ಕೊಠಡಿಗಳನ್ನು, ನೀರಿನ ಸಂಪ್, ಒವರ್ ಹೆಡ್ ಟ್ಯಾಂಕ್ ಇತ್ಯಾದಿಗಳನ್ನು ಸ್ವಚ್ಛವಾಗಿಡಲು ಹಾಗೂ ಬಳಸಲು ಯೋಗ್ಯವಾಗಿಟ್ಟುಕೊಳ್ಳಲು ಡಿ.ಡಿ.ಪಿ.ಐ ಮತ್ತು ಬಿ.ಇ.ಒಗಳ ಮೂಲಕ ಶಾಲೆಗಳಿಗೆ ಸೂಚಿಸಲಾಗಿದೆ. ಪ್ರತಿ ಶಾಲೆಯಲ್ಲಿ ಐಸೋಲೇಷನ್ ಕೋಣೆಯ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗಿದೆ. ಪ್ರತಿ ದಿನ ಶಿಕ್ಷಕರು ಶಾಲೆಯಲ್ಲಿ ಮಕ್ಕಳನ್ನು ಅವಲೋಕಿಸಿ ಕೋವಿಡ್-19 ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆ/ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಸೂಚಿಸಲು ತಿಳಿಸಲಾಗಿದೆ.ಸರ್ಕಾರದ ನಿರ್ದೇಶನದಂತೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಬಿಸಿಯೂಟದ ಬದಲು ಆಹಾರ ಧಾನ್ಯಗಳನ್ನು ವಿತರಿಸುತ್ತಿರುವುದನ್ನು ಮುಂದುವರೆಸಲು ತಿಳಿಸಲಾಗಿದೆ.
ತಾಲ್ಲೂಕು ಮತ್ತು ಶಾಲೆಯ ಹಂತದಲ್ಲಿ ಎಸ್.ಓ.ಪಿ ಅನುಷ್ಠಾನ ಮತ್ತು ಅನುಪಾಲನಾ ಸಮಿತಿಯನ್ನು ರಚಿಸಿಕೊಂಡು, ಶಾಲೆಗಳಲ್ಲಿ ನೈರ್ಮಲ್ಯ ಮತ್ತು ಆರೋಗ್ಯದ ಕುರಿತು ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ತಿಳಿಸಲಾಗಿದೆ.
ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಿರುವ ವೇಳಾಪಟ್ಟಿಯಂತೆ ಶಾಲೆಯಲ್ಲಿರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ತರಗತಿ ಕೊಠಡಿಗಳ(ಗರಿಷ್ಠ 15-20 ವಿದ್ಯಾರ್ಥಿಗಳು) ಲಭ್ಯತೆಗೆ ಅನುಗುಣವಾಗಿ ತಂಡಗಳನ್ನು ರಚಿಸಿಕೊಂಡು, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡು, ಮಕ್ಕಳ ಕಲಿಕೆಯನ್ನು ಖಾತ್ರಿಮಾಡಿಕೊಳ್ಳಲು ತಿಳಿಸಲಾಗಿದೆ.
ಜಿಲ್ಲಾಡಳಿತದ ಮೇಲ್ವಿಚಾರಣೆ ಮತ್ತು ಮೇಲುಸ್ತುವಾರಿಯೊಂದಿಗೆ 6 ರಿಂದ 9 ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಹಾಗೂ 10ನೇ ತರಗತಿಯ ಪ್ರಾರಂಭಕ್ಕೆ ಸಂಬಂಧಿಸಿದ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಆಧಿಕಾರಿಗಳು ಮೈಸೂರು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಿಳಿಸಲಾಗಿದೆ. ಶಾಲೆಯ ಹಂತದಲ್ಲಿ ಎಲ್ಲಾ ರೀತಿಯ ಪೂರ್ವಸಿದ್ಧತೆಯನ್ನುಮಾಡಿಕೊಂಡಿರುವುದರಿಂದ ಪೋಷಕರು ಮಕ್ಕಳನ್ನು ನಿರ್ಭಯವಾಗಿ ಶಾಲೆಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: