ಮೈಸೂರು

ಭಾರತೀಯ ಪ್ರಜೆಗೆ ಪಾಕಿಸ್ತಾನ ವಿಧಿಸಿದ ಗಲ್ಲು ಶಿಕ್ಷೆಗೆ ವಿರೋಧ : ಪ್ರತಿಭಟನೆ

ಭಾರತೀಯ ಪ್ರಜೆ ಮತ್ತು ನಿರಪರಾಧಿ ಕುಲಭೂಷಣ್ ಜಾದವ್ ಅವರಿಗೆ ಪಾಕಿಸ್ತಾನ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆಯನ್ನು ವಿರೋಧಿಸಿ ಕರ್ನಾಟಕ ಪ್ರಜಾ ಪಾರ್ಟಿ ವತಿಯಿಂದ ಪ್ರತಿಭಟನೆ ಮತ್ತು ಪಾದಯಾತ್ರೆ ನಡೆಯಿತು.

ಮೈಸೂರು ನ್ಯಾಯಾಲಯದ ಎದುರು ಗಾಂಧಿ ಪ್ರತಿಮೆ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಭಾರತದ ಪ್ರಜೆ ಕುಲಭೂಷಣ್ ಜಾದವ್ ಭಾರತೀಯ ಸೇನೆಯಲ್ಲಿ ಪ್ರಾಮಾಣಿಕ, ದಕ್ಷತೆ ಮತ್ತು ನಿಷ್ಠೆಯಿಂದ ಸೇವೆಯನ್ನು ಸಲ್ಲಿಸಿದ್ದಾರೆ. ಅಂತಹ ಒಂದು ಜವಾಬ್ದಾರಿಯುತ ಪ್ರಾಮಾಣಿಕ ವ್ಯಕ್ತಿಯ ಮೇಲೆ ಪಾಕಿಸ್ತಾನವು ಸುಳ್ಳು ಆಪಾದನೆ ಮಾಡಿ, ಅಸಾಂವಿಧಾನಿಕವಾಗಿ, ಕಾನೂನಿಗೆ ವಿರುದ್ಧವಾಗಿ ತರಾತುರಿಯಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ನೀಡಿರುವುದು ಪಾಕಿಸ್ತಾನ ನ್ಯಾಯಾಂಗ ವ್ಯವಸ್ಥೆಗೆ ಶೋಭೆ ತರುವಂಥದಲ್ಲ. ತೀರ್ಪು ಕಾನೂನಿಗೆ ವಿರುದ್ಧವಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಗಾಂಧಿ ಪ್ರತಿಮೆ ಎದುರು ತಮಟೆ ಚಳುವಳಿ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭ ರಾಜ್ಯಾಧ್ಯಕ್ಷ ಬಿ.ಶಿವಣ್ಣ, ಬಸವರಾಜು ಎಂ, ರುದ್ದಗೆರೆ ಶ್ರೀನಿವಾಸ್, ಮಹದೇವಸ್ವಾಮಿ ವಿ, ಮಂಜೇಗೌಡ, ಸಿ.ಡಿ.ಶಂಕರ್, ಗೋವಿಂದರಾಜು, ಕೃಷ್ಣೇಗೌಡ, ತಾರಾ, ಸುಮಿತ್ರ, ದಾಕ್ಷಾಯಿಣಿ,ದಿನೇಶ್ ಗೌಡ, ಚಂದ್ರಕಾಂತ್, ಲೋಕೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: