ಕರ್ನಾಟಕಪ್ರಮುಖ ಸುದ್ದಿಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ : ಡಾ.ಗೀತಾ ಮಹದೇವ್ ಪ್ರಸಾದ್ ಗೆ ಸಚಿವ ಸ್ಥಾನ ಸಾಧ್ಯತೆ?

ಪ್ರತಿಷ್ಠೆಯ ಹಾಗೂ ಜಿದ್ದಾ ಜಿದ್ದಿನ ಕಣವಾದ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ನಿಂದ ಬುಲಾವ್ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು  ದೆಹಲಿಯ ತುಘಲಕ್ ಲೇನ್ ನಲ್ಲಿರುವ ಅವರ ನಿವಾಸದಲ್ಲಿ  ಭೇಟಿಯಾದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಹೈಕಮಾಂಡ್ ಗೆ ಅತ್ಯಂತ ಸಂತಸವಾಗಿದ್ದು, ಅದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೆಹಲಿಯಿಂದ ಕರೆ ಬಂದಿದೆ ಎನ್ನಲಾಗುತ್ತಿದೆ. ಅದರಂತೆ ಮುಖ್ಯಮಂತ್ರಿಗಳು ದೆಹಲಿಗೆ ತೆರಳಲಿದ್ದು, ಕರ್ನಾಟಕದಲ್ಲಿ ಇನ್ನು ಎರಡು ಸಚಿವರ ನೇಮಕ ಹಾಗೂ ನಾಮನಿರ್ದೇಶಿತ ಸದಸ್ಯರ ನೇಮಕ ಕುರಿತೂ ಮುಖ್ಯಮಂತ್ರಿಗಳು ಈ ಸಂದರ್ಭ ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ.

ನಾಮನಿರ್ದೇಶಿತ ಸದಸ್ಯರ ಮೂರು ಸ್ಥಾನಕ್ಕೆ ಆರು ಮಂದಿ ಪೈಪೋಟಿ ನಡೆಸಿದ್ದಾರೆ. ಕೆ.ಪಿ.ನಂಜುಂಡಿ, ಮುಖ್ಯಮಂತ್ರಿ ಚಂದ್ರು, ಲಿಂಗಪ್ಪ, ಚಂದ್ರಶೇಖರ್,ಮೋಹನ್, ರಾಣಿ ಸತೀಶ್ ಅವರ ಹೆಸರು ಕೇಳಿ ಬಂದಿದೆ. ಇನ್ನು ಸಚಿವರ ಸ್ಥಾನಕ್ಕೆ ಎಸ್.ಆರ್.ಪಾಟೀಲ್, ಅಪ್ಪಾಜಿಗೌಡ, ಡಿ.ಜಿ.ಗೋವಿಂದಪ್ಪ ಹಾಗೂ ಡಾ.ಗೀತಾಮಹದೇವಪ್ರಸಾದ್ ಹೆಸರೂ ಕೇಳಿ ಬಂದಿದೆ. ಇದೀಗ ಮುಖ್ಯಮಂತ್ರಿಗಳ ಜೊತೆ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ತೆರಳಿದ್ದಾರೆ.

ಒಟ್ಟಿನಲ್ಲಿ ಮುಖ್ಯಮಂತ್ರಿಗಳು ಅಂದುಕೊಂಡಂತೆಯೇ ಎಲ್ಲವೂ ಆದರೆ ಪರಮಾಪ್ತ ಸ್ನೇಹಿತ ಮಹದೇವಪ್ರಸಾದ್ ಪತ್ನಿ ಡಾ.ಗೀತಾ ಮಹದೇವ್ ಪ್ರಸಾದ್ ಅವರಿಗೂ ಸಚಿವ ಸ್ಥಾನ ದೊರೆಯಬಹುದೆನ್ನುವ ಮಾತುಗಳು ಮುಖ್ಯಮಂತ್ರಿಗಳ ಆಪ್ತ ವಲಯದಿಂದ ಕೇಳಿ ಬಂದಿದೆ.  (ಎಸ್.ಎನ್-ಎಸ್.ಎಚ್)

 

Leave a Reply

comments

Related Articles

error: