ಮೈಸೂರು

ಸರಳವಾಗಿ ಜನರಿಗೆ ಅರಿವು ಮೂಡಿಸುವ ಶಕ್ತಿ ಜಾನಪದ ಕಲೆಗಿದೆ : ಪ್ರೇಮ್ ಕುಮಾರ್

ಮೈಸೂರು. ಡಿ. 31:- ಹೊಸ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಸರಳವಾಗಿ ಅರಿವು ಮೂಡಿಸುವ ಶಕ್ತಿ ಜಾನಪದ ಕಲೆಗೆ ಇದೆ. ಹಾಡು ಮತ್ತು ನಾಟಕ ರೂಪದಲ್ಲಿ ಸರ್ಕಾರಿ ಕಾರ್ಯಕ್ರಮಗಳ ಪ್ರಯೋಜನಗಳ ಕುರಿತು ಜನರಿಗೆ ಅರಿವು ಮೂಡಿಸಲು ಈ ಮಹತ್ವದ್ದು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಪ್ರೇಮ್ ಕುಮಾರ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ 3ದಿನಗಳ ಕಾಲ ಆಯೋಜಿಸಿರುವ ಮೈಸೂರು ವಿಭಾಗ ಮಟ್ಟದ ಜಾನಪದ ಕಲಾ ತಂಡಗಳ ತರಬೇತಿ ಕಾರ್ಯಾಗಾರವನ್ನು ಗುರುವಾರ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಉದ್ಘಾಟಿಸಲಾಯಿತು.
ಮಾನವ ಅಭಿವೃದ್ಧಿ ಸೂಚ್ಯಂಕವನ್ನು ವೃದ್ಧಿಗೊಳಿಸುವ ಊಟ, ವಸತಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜತೆಗೂಡಿ ಮುನ್ನಡೆಯಬೇಕಿದೆ ಎಂದರು .
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಸಹ ನಿರ್ದೇಶಕ ಪ್ರಸಾದ್ ಅವರು ಮಾತನಾಡಿ, ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಎಂಬ ಘೋಷ ವಾಕ್ಯದೊಂದಿಗೆ ಆರೋಗ್ಯ ಅಭಿಯಾನದ ಕಾರ್ಯಕ್ರಮ ಯೋಜನೆಗಳನ್ನು ಕುರಿತು ತೀವ್ರ ಪ್ರಚಾರದ ಮೂಲಕ ಜನ ಜಾಗೃತಿ ಮೂಡಿಸುವಂತೆ ಮಾಡುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.
ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು, ಶುಚಿತ್ವ, ಪೌಷ್ಠಿಕ ಆಹಾರ ಪದ್ಧತಿ, ತಾಯಿ ಮತ್ತು ಮಕ್ಕಳ ಆರೋಗ್ಯದ ಕುರಿತಾಗಿ ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಜನರಿಗೆ ಸುಲಲಿತವಾಗಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ. ಅಮರನಾಥ್ ರವರು ಮಾತನಾಡಿ ಜನರ ಭಾಷೆ, ಭಾವನೆಗಳಿಗೆ ತಕ್ಕಂತೆ ಗಾಯನ ಮತ್ತು ನಾಟಕಗಳ ಮೂಲಕ ಆರೋಗ್ಯದ ಕುರಿತು ಅರಿವು ಮೂಡಿಸುವುದು ಕಾರ್ಯಾಗಾರದ ಗುರಿಯಾಗಿದೆ. ಕೋವಿಡ್-19 ರೂಪಾಂತರಗೊಂಡು ಹರಡುತ್ತಿರುವ ಹಿನ್ನೆಲೆಯಲ್ಲಿ ಎಚ್ಚರವಹಿಸುವಂತೆ ಜಾಗೃತಿ ಮೂಡಿಸುವುದು ತುರ್ತು ಅನಿವಾರ್ಯವಾಗಿದೆ ಎಂದು ಹೇಳಿದರು.
ಮೈಸೂರು, ಹಾಸನ, ಮಂಡ್ಯ, ಚಿಕ್ಕಮಗಳೂರು, ಚಾಮರಾಜನಗರ, ಉಡುಪಿ, ಕೊಡಗು ಜಿಲ್ಲೆಯಿಂದ ಜಾನಪಕ ಕಲಾವಿದವರು ಭಾಗವಹಿಸಿದ್ದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರ ನಿರ್ದೇಶಕರಾದ ಡಾ.ಜಿ.ಎಸ್. ಯೋಗೇಶ್, ಆರ್‍ಸಿಹೆಚ್ ಅಧಿಕಾರಿ ಡಾ. ರವಿ ಎಲ್. ಜಿಲ್ಲಾ ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳಾದ ಡಾ. ರವಿ ಪಿ. ಎಸ್‍ಎಂಓಡಬ್ಲ್ಯೂಹೆಚ್‍ಓ ಡಾ. ಸುಧೀರ್‍ನಾಯಕ್, ಐಇಸಿ ಜಂಟಿ ನಿರ್ದೇಶಕರುಗಳಾದ ಜ್ಞಾನೇಶ್, ವಿಶ್ವೇಶ್ವರಯ್ಯ ಹಾಗೂ ಮಂಡ್ಯ ಜಿಲ್ಲೆಯ ಆರೋಗ್ಯಾಧಿಕಾರಿಗಳಾದ ಡಾ. ವೇಣುಗೋಪಾಲ್, ಸಂಪನ್ಮೂಲ ವ್ಯಕ್ತಿ ಜನಾರ್ಧನ್, ಯೋಗಾನಂದ ಡಿ., ಸೇರಿದಂತೆ ಹಲವು ಗಣ್ಯರು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: