ಮೈಸೂರು

ಪೂರೈಕೆಯಾದ ಲಸಿಕೆಯನ್ನು ಸಮರ್ಪಕವಾಗಿ ವಿತರಿಸಲು ಜಿಲ್ಲಾಡಳಿತ ಸಜ್ಜು : ರೋಹಿಣಿ ಸಿಂಧೂರಿ

ಕೋವಿಡ್ ಲಸಿಕೆ ಅಣುಕು ಕಾರ್ಯಾಚರಣೆಗೆ ಚಾಲನೆ

ಮೈಸೂರು,ಜ.2:- ಆರೋಗ್ಯ ಸಚಿವಾಲಯದ ಸೂಚನೆಯಂತೆ ಇಂದು ಮೈಸೂರು ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಅಣುಕು ಕಾರ್ಯಾಚರಣೆ ನಡೆಯುತ್ತಿದೆ.
ಬಿಳಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆ, ಮೈಸೂರು ನಗರದ ಜಯನಗರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಅಣುಕು ಕಾರ್ಯಾಚರಣೆ ನಡೆಯುತ್ತಿದೆ. ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಲಸಿಕಾ ಕಾರ್ಯಾಚರಣೆ ನಡೆಯಲಿದ್ದು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಪ್ರತಿ ಕೇಂದ್ರಗಳಲ್ಲಿ ಲಸಿಕೆ ಪಡೆಯಲಿರುವ ತಲಾ 25ಮಂದಿಯನ್ನು ಗುರುತಿಸಲಾಗಿದೆ.
ಪ್ರತಿ ಲಸಿಕಾ ಕೇಂದ್ರದಲ್ಲಿ ಮೂರು ಕೊಠಡಿಗಳನ್ನು (ನಿರೀಕ್ಷಣಾ ಕೊಠಡಿ, ಲಸಿಕಾ ಕೊಠಡಿ, ನಿಗಾ ಕೊಠಡಿ)ಮೀಸಲಿಡಲಾಗಿದ್ದು ಐವರು ಲಸಿಕಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಲಸಿಕೆ ಪಡೆದವರು 30ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ಇರಬೇಕು.
ಜಯನಗರದಲ್ಲಿರುವ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರಿಶೀಲನೆ ನಡೆಸಿ ಬಳಿಕ ಬಳಿಕ ಕೋವಿಡ್ ಲಸಿಕೆ ಅಣುಕು ಕಾರ್ಯಾಚರಣೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಲಸಿಕಾ ಕೇಂದ್ರಗಳು ಸಕಲ ರೀತಿಯಲ್ಲಿ ಸಜ್ಜಾಗಿವೆ. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ಪ್ರಯೋಗ ಮಾಡಲಾಗುವುದು. 32 ಸಾವಿರ ಮಂದಿ ಕೊರೋನ ವಾರಿಯರ್ಸ್ ಇದ್ದಾರೆ. ಆದ್ಯತೆ ಮೇರೆಗೆ ಇವರಿಗೆ ಲಸಿಕೆ ನೀಡುವಂತೆ ಕೇಂದ್ರದ ನಿರ್ದೇಶನ ಬಂದಿದೆ. ಬಳಿಕ ಸಾಧಕ ಬಾಧಕಗಳನ್ನು ಅನುಸರಿಸಿ ಸಾರ್ವಜನಿಕರಿಗೆ ಲಸಿಕೆ ವಿತರಣೆ ಮಾಡಲಾಗುವುದು ಎಂದರು.
ಲಸಿಕೆ ದಾಸ್ತಾನಿಗೆ ಈಗಿರುವ ಕೋಲ್ಡ್ ಸ್ಡೋರೇಜ್ ಬಳಕೆ ಮಾಡಲಾಗುವುದು. ಪ್ರತ್ಯೇಕ ಕೋಲ್ಡ್ ಸ್ಟೋರೇಜ್ ಅವಶ್ಯವಿಲ್ಲ. ಮಕ್ಕಳು ವಯೋವೃದ್ದರು ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಲಸಿಕೆ ಕೊಡಲಾಗುವುದು. ಸಾರ್ವಜನಿಕರೆಲ್ಲರಿಗೂ ಲಸಿಕೆ ನೀಡಬೇಕೆ ಬೇಡವೇ ಎಂಬುದನ್ನು ಕೇಂದ್ರ ಸರ್ಕಾರ ನಿರ್ದೇಶನ ನೀಡಲಿದೆ. ಲಸಿಕೆ ಯಾವ ಪ್ರಮಾಣದಲ್ಲಿ ಪೂರೈಕೆ ಆಗುತ್ತೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಪೂರೈಕೆಯಾದ ಲಸಿಕೆಯನ್ನು ಸಮರ್ಪಕವಾಗಿ ವಿತರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ವಿವರಿಸಿದರು.
ಬ್ರಿಟನ್ ಕೊರೋನಾ ವೈರಸ್ ಸೋಂಕಿತರ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಬಗ್ಗೆ ಜಿಲ್ಲಾಡಳಿತಕ್ಕೆ ರಿಪೋರ್ಟ್ ಕುರಿತ ನಿಖರ ಬಂದಿಲ್ಲ. ಒಂದೊಮ್ಮೆ ಪಾಸಿಟಿವ್ ಆಗಿದ್ದರೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಬೇಕಾಗಿತ್ತು. ಆ ರೀತಿಯ ಯಾವುದೇ ಸೂಚನೆ ಬಂದಿಲ್ಲದ ಕಾರಣ ಬ್ರಿಟನ್ ವೈರಸ್ ನೆಗೆಟಿವ್ ಇರಬಹುದು ಎಂದರು.
25 ಮಂದಿ ಕೊರೋನ ವಾರಿಯರ್ಸ್ಗೆ ಲಸಿಕೆ ನೀಡುವ ತಾಲೀಮು ಆರಂಭವಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: