ಕರ್ನಾಟಕಪ್ರಮುಖ ಸುದ್ದಿ

ಬೈಕ್ ನಲ್ಲಿ ಮೇಕೆಗಳಿಗೆ ಸೊಪ್ಪು ತರಲು ತೆರಳಿದ್ದ ವಕೀಲ ಶವವಾಗಿ ಪತ್ತೆ

ರಾಜ್ಯ(ಮಂಡ್ಯ),ಜ.3:- ಮೇಕೆಗಳಿಗೆ ಸೊಪ್ಪು ತರಲು ಬೈಕ್ನಲ್ಲಿ ಜಮೀನಿಗೆ ತೆರಳಿದ್ದ ವಕೀಲ ಶಿಂಷಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು,ಕೊಲೆ ಶಂಕೆ ವ್ಯಕ್ತವಾಗುತ್ತಿದೆ.

ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿ ನವಿಲೆ ಗ್ರಾಮದ ವಕೀಲ ರವೀಂದ್ರ (45) ಶವವಾಗಿ ಪತ್ತೆಯಾದವರು.ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ದೇಹವನ್ನು ವಿವಸ್ತ್ರಗೊಳಿಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ನದಿ ನೀರಿನಲ್ಲಿ ಮುಳುಗಿಸಿ ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಹಳೇಹಳ್ಳಿ-ನವಿಲೆ ಗ್ರಾಮದ ನಡುವೆ ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಫಿಲ್ಲರ್ ಕೆಳಗೆ ರವೀಂದ್ರ ಅವರ ಶವ ಶನಿವಾರ ಮಧ್ಯಾಹ್ನ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ರವೀಂದ್ರ ಮದ್ದೂರು ನ್ಯಾಯಾಲಯದಲ್ಲಿ ಕಳೆದ 15 ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿದ್ದರು. ಹತ್ಯೆಗೊಳಗಾಗಿರುವ ರವೀಂದ್ರ ಶನಿವಾರ ಬೆಳಿಗ್ಗೆ 7.30ರ ಸುಮಾರಿಗೆ ತಮ್ಮ ಮನೆಯಲ್ಲಿ ಕಾಫಿ ಸೇವನೆ ಮಾಡಿದ ನಂತರ ತಮ್ಮ ಬೈಕಿನಲ್ಲಿ ಶಿಂಷಾ ನದಿಪಾತ್ರದಲ್ಲಿರುವ ತಮ್ಮ ಜಮೀನಿನ ಬಳಿ ತೆರಳಿದ್ದಾರೆ. ಮೇಕೆಗಳಿಗೆ ಸೊಪ್ಪು ಕಿತ್ತ ನಂತರ ಬೈಕಿನ ಬಳಿ ಇಟ್ಟು ನಾಪತ್ತೆಯಾಗಿದ್ದರು.

ರವೀಂದ್ರ ಅವರು ಮಧ್ಯಾಹ್ನವಾದರೂ ಸಹ ಮನೆಗೆ ವಾಪಸ್ ಬಾರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದಾಗ ಸಂಜೆ ಹಳೇಹಳ್ಳಿ-ನವಿಲೆ ಗ್ರಾಮದ ನಡುವೆ ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಫಿಲ್ಲರ್ ಕೆಳಗೆ ಇವರ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ರವೀಂದ್ರ ಅವರನ್ನು ಕೊಲೆ ಮಾಡಿದ ನಂತರ ಶವವನ್ನು ಸೇತುವೆ ಕೆಳಗಿನ ನದಿ ನೀರಿನಲ್ಲಿ ಮುಳುಗಿಸಿ ಶವದ ಮುಖದ ಮೇಲೆ ಕಲ್ಲು ಇಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಎಎಸ್ಪಿ ಧನಂಜಯ, ಡಿವೈಎಸ್ಪಿ ಎಂ.ಜೆ.ಪೃಥ್ವಿ, ಸಿಪಿಐ ಕೆ.ಆರ್.ಪ್ರಸಾದ್, ಪಿಎಸ್‍ಐ ಪ್ರಭಾ ಹಾಗೂ ಸಿಬ್ಬಂದಿ ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: