ಮೈಸೂರು

‘ಏ.29ಕ್ಕೆ’ ಸಚಿವ ತನ್ವೀರ್ ಸೇಠ್ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ವಿರುದ್ಧ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಸಿ.ಎಸ್.ಟಿ ನೌಕರರ ಪರಿಷತ್ ಮತ್ತು ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜ್ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಚಿವರ ದುರಹಂಕಾರದ ನಡೆಯನ್ನು ಖಂಡಿಸಿ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಒಕ್ಕೂಟಗಳು ಏ.29ರಂದು ಬೆಳಿಗ್ಗೆ 11ಕ್ಕೆ ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಗ್ರ ಹೋರಾಟ ನಡೆಸಲಿವೆ ಎಂದು ತಿಳಿಸಿದರು.

ವಿವರ : ಪಿಯು ಮಂಡಳಿಯ ನೇಮಕಾತಿಯಲ್ಲಿ ಎಸ್.ಸಿ ಮತ್ತು ಎಸ್‍.ಟಿಯವರಿಗೆ ಶೇ.5ರಷ್ಟು ಹೆಚ್ಚುವರಿ ಮೀಸಲಾತಿ ರಿಯಾಯಿತಿ ನೀಡಬೇಕು ಹಾಗೂ ನಿಮ್ಮ ಕಾಲಾವಧಿಯಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದ್ದು ಅಲ್ಪ ಸಂಖ್ಯಾತರ ಸಚಿವರಾಗಿರುವ ನೀವು ಸೂಕ್ತ ಕ್ರಮಕೈಗೊಳ್ಳಿ ಎಂದು ಪ್ರಸ್ತಾಪಿಸಿ ಮನವಿ ಮಾಡುವ ಸಂದರ್ಭದಲ್ಲಿ ಏಕಾಏಕಿ ಕೆರಳಿದ ಸಚಿವರು ನನ್ನನ್ನು ಅವಾಚ್ಯ ಶಬ್ಧಗಳಿಂದ ಜಾತಿ ನಿಂದನೆ ಮಾಡಿ ತಮ್ಮ ಅಂಗರಕ್ಷಕರಿಂದ ಕಚೇರಿಯಿಂದ ಹೊರದೂಡಿಸಿದರಲ್ಲದೇ ನನ್ನ ವಿರುದ್ಧವೇ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಸಚಿವರ ಕಚೇರಿಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರೀಕ್ಷಿಸಿ ಸಾಕ್ಷಿಯಾಗಿ ಪರಿಗಣಿಸಬಹುದೆಂದು ಕೋರಿದರು.

ಸಚಿವರು ತಮಗೆ ಕೊಲೆ ಬೆದರಿಕೆ ಹಾಗೂ ಹಲ್ಲೆಗೆ ಯತ್ನಿಸಿದ್ದಾರೆಂದು ನನ್ನನ್ನೂ ಸೇರಿಸಿ ಒಟ್ಟು ಇತರೆ 7 ಮಂದಿ ವಿರುದ್ಧ ಬೆಂಗಳೂರಿನ ವಿಧಾನಸಭಾ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿರುವುದು ಖಂಡನೀಯ. ನನ್ನೊಂದಿಗೆ ಅಮಾಯಕ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲಾಗಿ ಅವರ ಭವಿಷ್ಯಕ್ಕೆ ಕುತ್ತು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.  ಸಚಿವರ ಕ್ರಮವನ್ನು ಖಂಡಿಸಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸಚಿವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದರು. ಆದರೆ ನನಗಿಂತ ತಡವಾಗಿ ಸಚಿವರ ಆಪ್ತ ಸಹಾಯಕ ನೀಡಿದ ದೂರನ್ನು ತಕ್ಷಣವೇ ಜಾರಿಗೊಳಿಸಿ ಕಾನೂನು ಕ್ರಮ ಕೈಗೊಂಡ ಪೊಲೀಸರ ನಡೆಯನ್ನು ಖಂಡಿಸಿದ ಅವರು, ಶಿಕ್ಷಣ ಸಚಿವ ತನ್ವೀರ್ ಸೇಠ್ ದುರಹಂಕಾರದ ನಡೆಯನ್ನು ಖಂಡಿಸಿದರು. (ಕೆ.ಎಂ.ಆರ್ -ಎಸ್.ಎಚ್)

Leave a Reply

comments

Related Articles

error: