ಮೈಸೂರು

ಮುಡಾ ಸೈಟ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ವಂಚಕನ ಬಂಧನ

ಮೈಸೂರು, ಜ.4:- ಜನರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ವತಿಯಿಂದ ಸೈಟ್ ಕೊಡಿಸುತ್ತೇನೆ ಎಂದು ವಂಚಿಸುತ್ತಿದ್ದ ವಂಚಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಮಂತರ ಪರಿಚಯ ಮಾಡಿಕೊಳ್ಳುತ್ತಿದ್ದ ವಂಚಕ ಕಡಿಮೆ ಬೆಲೆಗೆ ಸೈಟು ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ.

ಬಂಧಿತನನ್ನು ಬೆಳಗಾವಿ ಮೂಲದ ಸಾಗರ್ ದೇಶಪಾಂಡೆ ಎಂದು ಗುರುತಿಲಾಗಿದೆ. ಸರಸ್ವತಿಪುರಂ ಪೊಲೀಸರು ಶಿರಡಿಯಲ್ಲಿ ನಿನ್ನೆ ವ್ಯಕ್ತಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಮೂಡಾದ ನಕಲಿ ಲೆಟರ್ ಹೆಡ್ ಬಳಸಿಕೊಂಡು ಕೋಟ್ಯಂತರ ರೂಪಾಯಿಯನ್ನು ಸಾಗರ್ ದೇಶಪಾಂಡೆ ವಂಚಿಸಿದ್ದಾನೆ ಎಂಬ ಆರೋಪವಿದೆ. ಮೈಸೂರು ಮಾತ್ರವಲ್ಲದೇ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಇನ್ನಿತರ ಕಡೆಗಳಲ್ಲಿ ಸೈಟ್‌ ಕೊಳ್ಳುವವರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಸೈಟ್‌ ಕೊಡಿಸುವುದಾಗಿ ನಂಬಿಸಿ, ವಂಚನೆ ಮಾಡುತ್ತಿದ್ದ. ಮೈಸೂರು ನಗರದಲ್ಲಿ ವಿಸ್ಮಯ ರೆಸ್ಟೋರೆಂಟ್ ನಡೆಸುತ್ತಿದ್ದ ವಂಚಕ ಅಲ್ಲಿಗೆ ಬರುವ ಶ್ರೀಮಂತರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಮೂಡಾದಲ್ಲಿ ನಮಗೆ ಬೇಕಾದ ಅಧಿಕಾರಿಗಳಿದ್ದು ನಿಮಗೆ ಕಡಿಮೆ ದರದಲ್ಲಿ ಸೈಟ್ ಕೊಡಿಸುತ್ತೇನೆಂದು ನಂಬಿಸಿ ಹಣ ವಸೂಲಿ ಮಾಡುತ್ತಿದ್ದ. ನಂತರ ಹಣ ಪಡೆದವರಿಗೆ ಮೂಡಾದ ನಕಲಿ ಲೆಟರ್ ಹೆಡ್ ನೀಡಿ ವಂಚನೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಎಚ್ಚೆತ್ತ ಮೂಡಾ ಅಧಿಕಾರಿಗಳು ತಮ್ಮ ಅಧಿಕೃತ ಸೈಟ್‌ ಅಲಾಟ್‌ ಮೆಂಟ್‌ ಪತ್ರಗಳಿಗೆ ಸುರಕ್ಷತಾ ಕ್ರಮವಾಗಿ ಹಾಲೋಗ್ರಾಂ ನ್ನು ಅಂಟಿಸಲು ಆರಂಭಿಸಿದೆ.

ಇದನ್ನು ನಕಲು ಮಾಡಲು ಸಾಧ್ಯವಿಲ್ಲ ಎಂದು ಮೂಡಾ ಅಧ್ಯಕ್ಷ ರಾಜೀವ್‌ ಹೇಳಿದ್ದಾರೆ. ಪೋಲೀಸರು ವಂಚಕ ದೇಶಪಾಂಡೆ ವಿಚಾರಣೆಯನ್ನು ಮುಂದುವರೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: