
ದೇಶಪ್ರಮುಖ ಸುದ್ದಿ
ಹಿಮಾಚಲ ಪ್ರದೇಶ: 1700ಕ್ಕೂ ಹೆಚ್ಚು ಪಕ್ಷಿಗಳ ಸಾವು; ಪ್ರವಾಸೋದ್ಯಮ ಬಂದ್
ಶಿಮ್ಲಾ,ಜ.5-ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಪಾಂಗ್ ಡ್ಯಾಮ್ ನದಿಯ ಸುತ್ತ ಮುತ್ತ 1700ಕ್ಕೂ ಹೆಚ್ಚು ವಲಸೆ ಪಕ್ಷಿಗಳು ಮೃತಪಟ್ಟಿದೆ.
ವಲಸೆ ಪಕ್ಷಿಗಳು ಮೃತಪಟ್ಟಿರುವುದರಿಂದ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಧಮೇಟಾ ಮತ್ತು ನಗ್ರೋಟಾ ಸುರಿಯಾನ್ ಅರಣ್ಯ ವಿಭಾಗಗಳಲ್ಲಿನ ಜಗ್ಮೋಲಿ ಮತ್ತು ಗುಗ್ಲಡಾ ಪ್ರದೇಶಗಳಲ್ಲಿ ಹೆಚ್ಚಿನ ಪಕ್ಷಿಗಳು ಮೃತಪಟ್ಟಿವೆ.
ಹೆಬ್ಬಾತು, ಗಾವಿಲಾ, ರೀವರ್ ಟೇಲ್ ಸೇರಿದಂತೆ ವಿವಿಧ ಪ್ರಬೇಧಕ್ಕೆ ಸೇರಿದ 1700ಕ್ಕೂ ಹೆಚ್ಚು ಪಕ್ಷಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಕಾಂಗ್ರಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನದಿ ಪಾತ್ರದ ಸುಮಾರು 10 ಕಿ,ಮೀಟರ್ ವ್ಯಾಪ್ತಿಯಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಹಾಗೇ ಕೋಳಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಮೃತ ಪಕ್ಷಿಗಳ ರಕ್ತ ಹಾಗೂ ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು ಇನ್ನಷ್ಟೆ ವರದಿ ಬರಬೇಕಿದೆ ಎಂದು ಅವರು ಮಾಹಿತಿ ನೀಡಿದರು.
ಸಾವಿಗೀಡಾದ ವಲಸಿಗ ಪಕ್ಷಿಗಳ ಪೈಕಿ ಶೇ. 95ರಷ್ಟು ಸೈಬೀರಿಯಾ ಮತ್ತು ಮಂಗೋಲಿಯಾದಿಂದ ಬಂದ ಬಾರ್ ಹೆಡೆಡ್ ಗೀಸ್ ಪಕ್ಷಿಗಳಾಗಿವೆ. ಪ್ರತಿ ವರ್ಷ ಈ ಅವಧಿಯಲ್ಲಿ 1.15-1.20 ಲಕ್ಷದಷ್ಟು ಪಕ್ಷಿಗಳು ಪೊಂಗ್ ಡಮ್ ಪಕ್ಷಿಧಾಮಕ್ಕೆ ವಲಸೆ ಬರುತ್ತವೆ. ನಾಲ್ಕು ತಿಂಗಳವರೆಗೆ ಇಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. (ಏಜೆನ್ಸೀಸ್, ಎಂ.ಎನ್)