ಪ್ರಮುಖ ಸುದ್ದಿವಿದೇಶ

ರೂಪಾಂತರಿ ಕೊರೊನಾ ಹೆಚ್ಚಳ: ಇಂಗ್ಲೆಂಡ್​ನಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್​ಡೌನ್ ಘೋಷಣೆ

ಲಂಡನ್​,ಜ.5-ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಇಂಗ್ಲೆಂಡ್​ನಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಿದ್ದಾರೆ.

ಸೋಂಕಿನ ಸರಪಳಿಯನ್ನು ಕಡಿತಗೊಳಿಸುವ ಉದ್ದೇಶದಿಂದ ಫೆಬ್ರವರಿ ಮಧ್ಯದವರೆಗೆ ಲಾಕ್​ಡೌನ್​ ಮುಂದುವರಿಯುವ ಸಾಧ್ಯತೆ ಇದೆ. ನಾಳೆಯಿಂದಲೇ ಇಂಗ್ಲೆಂಡ್ ಮತ್ತೊಮ್ಮೆ​ ಸಂಪೂರ್ಣ ಸ್ತಬ್ಧವಾಗಲಿದೆ. ಫೆಬ್ರವರಿ ಮಧ್ಯದವರೆಗೂ ಲಾಕ್​ಡೌನ್ ಜಾರಿಯಲ್ಲಿರಲಿದ್ದು, ಬುಧವಾರದಿಂದ ಎಲ್ಲಾ ಶಾಲಾ-ಕಾಲೇಜುಗಳು ಬಂದ್ ಆಗಲಿವೆ.

ನಿನ್ನೆ ವರ್ಚುವಲ್​ ಸಭೆಯಲ್ಲಿ ಮಾತನಾಡಿದ ಜಾನ್ಸನ್​, ಕೊರೊನಾ ಸೋಂಕಿನಿಂದಾಗಿ ಸುಮಾರು 27 ಸಾವಿರ ಮಂದಿ ಆಸ್ಪತ್ರೆಯಲ್ಲಿದ್ದಾರೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಕಾಣಿಸಿಕೊಂಡ ಮೊದಲನೇ ಅಲೆಯಿಂದಾಗಿ ಶೇ.40ಕ್ಕೂ ಹೆಚ್ಚು ಮಂದಿ ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಕಳೆದ ಮಂಗಳವಾರ 80 ಸಾವಿರಕ್ಕೂ ಹೆಚ್ಚು ಮಂದಿಗೆ ಕೇವಲ 24 ಗಂಟೆಗಳಲ್ಲಿ ಪಾಸಿಟಿವ್​ ವರದಿಯಾಗಿತ್ತು ಎಂದು ಮಾಹಿತಿ ನೀಡಿದರು. ಈಗಾಗಲೇ ಅನೇಕ ದೇಶಗಳು ಅತಿ ಕಠಿಣವಾದ ನಿರ್ಧಾರಗಳನ್ನು ಜಾರಿ ಮಾಡಿವೆ. ರೂಪಾಂತರಿ ಕೊರೊನಾ ವೈರಸ್​ ಅನ್ನು ನಿಯಂತ್ರಣಕ್ಕೆ ತರಲು ಲಸಿಕೆ ಇದ್ದರೂ ನಾವು ಕೂಡ ಇಂಥದ್ದೇ ನಿರ್ಧಾರವನ್ನು ಅನುಸರಿಸಬೇಕಾಗುತ್ತದೆ ಎಂದು ಲಾಕ್​ಡೌನ್​ ಘೋಷಣೆ ಮಾಡಿದರು.

ಇಂಗ್ಲೆಂಡ್​ ಖಂಡಿತವಾಗಿ ರಾಷ್ಟ್ರೀಯ ಲಾಕ್​ಡೌನ್ ಮೊರೆ ಹೋಗಬೇಕಿದೆ. ಕಳೆದ ವರ್ಷ ಮಾರ್ಚ್​ನಿಂದ ಜೂನ್​ವರೆಗೆ ಯಾವ ರೀತಿ ಲಾಕ್​ಡೌನ್​ ಮಾಡಿದ್ದೆವು ಅದೇ ಕ್ರಮಗಳು ನೂತನ ಲಾಕ್​ಡೌನ್​ನಲ್ಲಿ ಮುಂದುವರಿಯಲಿದೆ. ಶಾಲೆಗಳನ್ನು ಮುಚ್ಚುವುದು, ವರ್ಕ್​ ಫ್ರಮ್​ ಹೋಮ್​ ಮುಂದುವರಿಸುವುದು, ಮನೆಯಿಂದ ಹೊರ ಬರುವುದಕ್ಕೆ ಸೀಮಿತ ಅವಧಿ ನಿಗದಿ ಮಾಡುವುದು ಸೇರಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಜಾನ್ಸನ್​ ಹೇಳಿದ್ದಾರೆ.

ಇಂಗ್ಲೆಂಡ್​ನಲ್ಲಿ ಸುಮಾರು 44 ಮಿಲಿಯನ್​ ಜನರಿದ್ದು, ಈಗಾಗಲೇ ಕಠಿಣ ನಿರ್ಬಂಧಗಳ ಅಡಿಯಲ್ಲಿ ಜೀವಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಬ್ರಿಟನ್​, ಕೊರೊನಾ ವೈರಸ್​ನ ವಿಶ್ವದ ಕೆಟ್ಟ ಮರಣ ಪ್ರಮಾಣವನ್ನು ಹೊಂದಿದೆ. ಪಾಸಿಟಿವ್​ ಪ್ರಕರಣಗಳು ತಡೆಯುವಲ್ಲಿ ವಿಫಲವಾಗಿದ್ದು, ರೂಪಾಂತರಿ ಕೊರೊನಾ ವೈರಸ್​ ಮೇಲೆ ಆರೋಪ ಮಾಡುವ ಕೆಲಸ ನಡೆಯುತ್ತಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​, ಎಂ.ಎನ್)

Leave a Reply

comments

Related Articles

error: