ಮೈಸೂರು

ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿದ ಹಿನ್ನೆಲೆ : ಕೋಳಿ ಮತ್ತು ಇತರೆ ಪಕ್ಷಿಗಳ ಸಾಗಾಣಿಕೆಗೆ ನಿರ್ಬಂಧ

ಮೈಸೂರು,ಜ.5:- ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಗಡಿ ಭಾಗದಲ್ಲಿ ಬರುವ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ‌ಪೋಸ್ಟ್‌ನಿಂದ ಕೋಳಿ ಮತ್ತು ಇತರೆ ಪಕ್ಷಿಗಳ ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಕೇರಳದಿಂದ ಬಾವಲಿ ಚೆಕ್ ಪೋಸ್ಟ್ ಮೂಲಕ ಬರುವ ವಾಹನಗಳನ್ನು ಸ್ಯಾನಿಟೈಜ್ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ಕೋಳಿಗಳು, ಹಿತ್ತಲಕೋಳಿಗಳು, ಹಕ್ಕಿಗಳು, ಕಾಡುಹಕ್ಕಿಗಳು, ವಲಸೆ ಹಕ್ಕಿಗಳು ಯಾವುದೇ ಹಕ್ಕಿಗಳಲ್ಲಿ ಅಸ್ವಾಭಾವಿಕ ರೋಗ ಲಕ್ಷಣಗಳು ಕಂಡುಬಂದಲ್ಲಿ ಅಥವಾ ಅಸ್ವಾಭಾವಿಕ ಮರಣ ಸಂಭವಿಸಿದಲ್ಲಿ ಕೂಡಲೇ ಪಶುಪಾಲನ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ತೀವ್ರ ನಿಗಾವಹಿಸಿ ಹಕ್ಕಿ ಜ್ವರ ಸಂಭವನೀಯತೆಯನ್ನು ಪರಿಗಣಿಸಿ ಸಂಬಂಧ ಪಟ್ಟ ಪ್ರಯೋಗಾಲಯಕ್ಕೆ ರೋಗ ವಿಶ್ಲೇಷಣೆ ನಡೆಸುವ ಬಗ್ಗೆ ಕ್ರಮ ವಹಿಸಲು ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಜೀವಂತ ಕೋಳಿ/ಮಾಂಸ ಮಾರಾಟ ಕೇಂದ್ರಗಳು ಮತ್ತು ಕೋಳಿ ಸಾಗಾಣಿಕೆ ವಾಹನಗಳ ಚಲನ ವಲನದ ಬಗ್ಗೆ ನಿಗಾ ವಹಿಸಲು ಹಾಗೂ ಸಂದರ್ಭಾನುಸಾರ ಸೂಕ್ತ ಕ್ರಮ ವಹಿಸಿ ಮಾಹಿತಿ ನೀಡಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: