ದೇಶಪ್ರಮುಖ ಸುದ್ದಿಮನರಂಜನೆ

ತೆಲುಗಿನ ಖ್ಯಾತ ಗೀತರಚನೆಕಾರ ವೆನ್ನೆಲಕಂಟಿ ರಾಜೇಶ್ವರ ಪ್ರಸಾದ್‌ ನಿಧನ

ಹೈದರಾಬಾದ್,ಜ.6-ತೆಲುಗು ಚಿತ್ರರಂಗದ ಜನಪ್ರಿಯ ಗೀತರಚನೆಕಾರ ವೆನ್ನೆಲಕಂಟಿ ರಾಜೇಶ್ವರ ಪ್ರಸಾದ್‌ (63) ಹೃದಯಾಘಾತದಿಂದ ನಿಧನರಾಗಿದ್ದಾರೆ. ಚೆನ್ನೈನಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.

ವೆನ್ನೆಲಕಂಟಿ ಅವರ ನಿಧನಕ್ಕೆ ಟಾಲಿವುಡ್‌ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಗಾಯಕಿ ಚಿನ್ಮಯಿ ಶ್ರೀಪಾದ್‌, ನಿರ್ದೇಶಕ ಸುರೇಂದರ್‌ ರೆಡ್ಡಿ ಸೇರಿದಂತೆ ಅನೇಕರು ವೆನ್ನೆಲಕಂಟಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ವೆನ್ನೆಲಕಂಟಿ ಎಂದೇ ಖ್ಯಾತರಾಗಿದ್ದ ಅವರು 2 ಸಾವಿರಕ್ಕೂ ಅಧಿಕ ಸಿನಿಮಾ ಗೀತೆಗಳನ್ನು ಬರೆಯುವ ಮೂಲಕ ಜನಪ್ರಿಯರಾಗಿದ್ದರು. ಮೂಲತಃ ಬ್ಯಾಂಕ್‌ ಉದ್ಯೋಗಿ ಆಗಿದ್ದ ವೆನ್ನೆಲಕಂಟಿ ಅವರು 1986ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಅವರ ತಂದೆ ಕೂಡ ಸಿನಿಮಾ ಕ್ಷೇತ್ರದ ಜೊತೆ ನಂಟು ಹೊಂದಿದ್ದರು. 1986ರಲ್ಲಿ ತೆರೆಕಂಡ ‘ಶ್ರೀರಾಮಚಂದ್ರುಡು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ವೆನ್ನೆಲಕಂಟಿ ಪರಿಚಯವಾದರು. ಗೀತರಚನಾಕಾರನಾಗಿ ಮಾತ್ರವಲ್ಲದೆ, 300ಕ್ಕೂ ಅಧಿಕ ಸಿನಿಮಾಗಳಿಗೆ ಸಂಭಾಷಣಾಕಾರನಾಗಿಯೂ ಅವರು ಕೆಲಸ ಮಾಡಿದ್ದರು.

ವೆನ್ನೆಲಕಂಟಿ ಕೊನೆಯದಾಗಿ ಹಾಡು ಬರೆದಿದ್ದು, ನಟಿ ಕೀರ್ತಿ ಸುರೇಶ್‌ ಅಭಿನಯದ ‘ಪೆಂಗ್ವಿನ್‌’ ಚಿತ್ರಕ್ಕಾಗಿ. ಈ ಸಿನಿಮಾ 2020ರಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ ಮೂಲಕ ತೆರೆಕಂಡಿತ್ತು. ವೆನ್ನೆಲಕಂಟಿ ಅವರ ಸಹೋದರರು ಮತ್ತು ಇಬ್ಬರು ಪುತ್ರರು ಕೂಡ ಟಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: