ಮೈಸೂರು

ರೈತರಿಗೆ ನೀರು, ವಿದ್ಯುತ್ ಪೂರೈಸಿದರೆ ಅಭಿವೃದ್ಧಿ ಸಾಧ್ಯ : ಕ್ಲೀಫ್‍ಲವ್

ಇತರ ರಾಷ್ಟ್ರಗಳಂತೆ ಭಾರತದಲ್ಲೂ ರೈತರಿಗೆ ದಿನದ 24 ಗಂಟೆಯೂ ವಿದ್ಯುತ್, ನೀರು ಒದಗಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಇಸ್ರೇಲ್ ದೇಶದ ಪ್ರತಿನಿಧಿ ಹಾಗೂ ಭಾರತ ಸರ್ಕಾರದ ರಾಷ್ಟ್ರೀಯ ತೋಟಗಾರಿಕ ಮಂಡಳಿ ಕೃಷಿ ತಜ್ಞ ಕ್ಲೀಫ್‍ಲವ್ ಅಭಿಪ್ರಾಯಪಟ್ಟರು.
ಶನಿವಾರ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ರಾಜೇಂದ್ರ ಭವನದಲ್ಲಿ ರೈತಮಿತ್ರ ಫಾರ್ಮರ್ಸ್ ಪ್ರೊಡ್ಯುಸರ್ ಕಂ.ಲಿ. ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಾವು, ಚಿಯಾ ಬೆಳೆಯ ಕುರಿತ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಭಾರತ ವಿಶ್ವದ ಇತರ ರಾಷ್ಟ್ರಗಳಿಗಿಂತ ಹೇರಳವಾದ ಸಂಪನ್ಮೂಲ ಹೊಂದಿದೆ. ಆದರೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಇಸ್ರೇಲ್‍ನಲ್ಲಿ ಮಾವಿನ ಉತ್ಪಾದನೆ ಭಾರತಕ್ಕಿಂತ ಹೆಚ್ಚಿದ್ದು, ಭಾರತದಲ್ಲಿ 1 ಹೆಕ್ಟೇರ್‍ಗೆ 10 ಟನ್ ಮಾವು ಬೆಳೆದರೆ, ಇಸ್ರೇಲ್‍ನಲ್ಲಿ 30 ರಿಂದ 50 ಟನ್ ಮಾವು ಬೆಳೆಯುತ್ತಾರೆ. ಇದಕ್ಕೆ ಪ್ರಮುಖ ಕಾರಣ ರೈತರಿಗೆ ದೊರೆಯುತ್ತಿರುವ ಸವಲತ್ತುಗಳು. ಅಲ್ಲಿನ ಸರ್ಕಾರ ರೈತರಿಗೆ ಪೂರಕವಾಗುವ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿಗೆ ನೆರವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ  ರೈತ ಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂ.ಲಿ. ಅಧ್ಯಕ್ಷ ಕುರುಬೂರು ಶಾಂತಕುಮಾರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಿ.ಮಂಜುನಾಥ್,  ಇಲವಾಲ  ತೋಟಗಾರಿಕಾ ಕಾಲೇಜು ಡೀನ್ ಪ್ರೊ.ಡಿ.ಎಸ್.ಕೆ.ಸ್ವಾಮಿ, ನಬಾರ್ಡ್ ಜಿಲ್ಲಾ ಸಹಾಯಕ ವ್ಯವಸ್ಥಾಪಕ ಅರವಮುದನ್, ಜೆಎಸ್‍ಎಸ್ ಕೆವಿಕೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಅರುಣ್ ಬಾಳಮಟ್ಟಿ, ರೈತಮಿತ್ರ ಫಾರ್ಮರ್ಸ್  ಪ್ರೊಡ್ಯೂಸರ್ ಕಂ.ಲಿ. ಹಿರಿಯ ನಿರ್ದೇಶಕ ಟಿ.ವಿ.ಗೋಪಿನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: