ಮೈಸೂರು

20 ಸಾವಿರ ಬೀದಿಬದಿ ವ್ಯಾಪಾರಿಗಳಿಂದ ಕಿರುಸಾಲಕ್ಕೆ ಅರ್ಜಿ: 5 ಸಾವಿರಕ್ಕೂ ಹೆಚ್ಚು ಮಂದಿಗೆ ಸಾಲ ಮಂಜೂರಾತಿ; ನಗರಪಾಲಿಕೆ ಎಡಿಸಿ ಶಶಿಕುಮಾರ್

ಮೈಸೂರು,ಜ.7-ಕಿರುಸಾಲ ಸೌಲಭ್ಯ ಪಡೆಯಲು ಮೈಸೂರಿನಲ್ಲಿ 20 ಸಾವಿರ ಬೀದಿಬದಿ ವ್ಯಾಪಾರಿಗಳು ಆನ್ ಲೈನ್ ಮೂಲಕ ಅರ್ಜಿ ಹಾಕಿದ್ದು, ಆ ಪೈಕಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಸಾಲ ಮಂಜೂರಾತಿ ಆಗಿದೆ ಎಂದು ನಗರಪಾಲಿಕೆಯ ಹೆಚ್ಚುವರಿ ಆಯುಕ್ತ ಶಶಿಕುಮಾರ್ ಹೇಳಿದರು.

ನಗರಪಾಲಿಕೆ ವತಿಯಿಂದ ಅಗ್ರಹಾರದಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಇಂದು ಸಾಲ ಸೌಲಭ್ಯ ಪಡೆದ ಬೀದಿಬದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟು ಬಗ್ಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ್ ಯೋಜನೆಯಡಿ ಬೀದಿಬದಿ ವ್ಯಾಪಾರಗಳ ಜೀವನೋಪಾಯಕ್ಕಾಗಿ 10 ಸಾವಿರ ರೂ.ಗಳ ಕಿರುಸಾಲ ಸೌಲಭ್ಯವನ್ನು ನೀಡುವುದನ್ನು ದೇಶಾದ್ಯಂತ ಜಾರಿಗೊಳಿಸಿದ್ದಾರೆ. ಸುಮಾರು 50 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯವನ್ನು ವಿಸ್ತರಿಸುವ ಮಹತ್ವದ ಯೋಜನೆ ಇದಾಗಿದೆ. ಮೈಸೂರಿನಲ್ಲೂ 20 ಸಾವಿರ ಬೀದಿಬದಿ ವ್ಯಾಪಾರಿಗಳು ಅರ್ಜಿ ಹಾಕಿದ್ದು, ಈ ಪೈಕಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಸಾಲ ಮಂಜೂರಾತಿ ಆಗಿದೆ. ಉಳಿದವರಿಗೆ ಮುಂದಿನ 1-2 ತಿಂಗಳಲ್ಲಿ ಸಾಲ ಮಂಜೂರಾತಿ ಆಗುತ್ತದೆ ಎಂದರು.

ಸಾಲವನ್ನು 11 ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು. ಅದನ್ನು ಡಿಜಿಟಲ್ ಪೇಮೆಂಟ್ ಮೂಲಕ ಮಾಡಿದರೆ ವರ್ಷಕ್ಕೆ 1200 ರೂ. ಕ್ಯಾಶ್ ಬ್ಯಾಕ್ ಸೌಲಭ್ಯ ಸಿಗುತ್ತೆ. ವ್ಯಾಪಾರಿಗಳು ತಾವು ಪಡೆದ ಸಾಲಕ್ಕೆ ಶೇ.7 ಬಡ್ಡಿ ಕಟ್ಟಬೇಕು. ಬಡ್ಡಿಯ ಹಣ ಕ್ಯಾಶ್ ಬ್ಯಾಕ್ ಮೂಲಕ ವಾಪಾಸ್ ಆಗುತ್ತದೆ. ಅಲ್ಲಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ಪಡೆದಂತಾಗುತ್ತದೆ. ಹೀಗಾಗಿ ವ್ಯಾಪಾರಿಗಳಲ್ಲಿ ಬ್ಯಾಂಕ್ ವ್ಯವಹಾರವನ್ನು ಡಿಜಿಟಲ್ ಪೇಮೆಂಟ್ ಮೂಲಕ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳುವಳಿಕೆ ಮತ್ತು ಅರಿವನ್ನು ದೇಶಾದ್ಯಂತ ಮೂಡಿಸಲಾಗುತ್ತಿದ್ದು, ಇಂದು ನಗರಪಾಲಿಕೆಯಿಂದ ವಲಯ ಕಚೇರಿ  1 ರಲ್ಲಿ ಕಾರ್ಯಕ್ರಮ ಮಾಡಲಾಗಿದೆ ಎಂದು ಹೇಳಿದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: