ಮೈಸೂರು

ಬಾಲಭವನದಲ್ಲಿ ಚಿಣ್ಣರ ಕಲರವ : ಬೇಸಿಗೆ ಶಿಬಿರಕ್ಕೆ ಚಾಲನೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮೈಸೂರಿನ ಬಾಲಭವನದಲ್ಲಿ ಆಯೋಜಿಸಿರುವ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಿತ್ರ ನಟ ಚಂದನ್ ಬಲೂನ್ ಹಾರಿಬಿಡುವ ಮೂಲಕ ಶನಿವಾರ ಚಾಲನೆ ನೀಡಿದರು.
15 ದಿನಗಳ ಕಾಲ ನಡೆಯುವ ಶಿಬಿರವನ್ನು ಉದ್ಘಾಟಿಸಿದ ಅವರು, ಮಕ್ಕಳಿಗೆ ಹಾರೋಣ ಬಾ ಹಾಡು ಹೇಳಿ ರಂಜಿಸಿದರಲ್ಲದೆ ನೀತಿ ಕತೆಗಳು, ಹಳ್ಳಿಗಾಡಿನ ಸೊಬಗು, ಪರಿಸರದ ಬಗೆಗೆ ಕೆಲ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುವ ಮೂಲಕ ಗಮನ ಸೆಳೆದರು.  ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೆ.ರಾಧಾ, ಬೇಸಿಗೆ ರಜೆಯಲ್ಲಿ ಮಕ್ಕಳು ಅಜ್ಜಿ ಮನೆಗೆ ತೆರಳಿ ಆನಂದಪಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಬೇಸಿಗೆ ಶಿಬಿರಗಳು ಹೆಚ್ಚಾಗುತ್ತಿದ್ದು ಎಲ್ಲರೂ ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಸೇರಿಸುತ್ತಿದ್ದಾರೆ. ಇವು ಮಕ್ಕಳಿಗೆ ಅಜ್ಜಿ ಮನೆಯ ವಾತಾವರಣ ಕಲ್ಪಿಸುವುದಲ್ಲದೆ ಹಾಡು, ನೃತ್ಯ, ನಾಟಕಾಭಿನಯ ಸೇರಿದಂತೆ ಇನ್ನಿತರ ಕಲೆಗಳನ್ನು ಕಲಿಯಲು ನೆರವಾಗುತ್ತವೆ. ಜತೆಗೆ ನಗರದ ಮಕ್ಕಳಿಗೆ ಹಳ್ಳಿಯ ಸೊಬಗಿನ ಸಿಂಚನ ನೀಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿಗಳಾದ ಪದ್ಮ, ಮಂಜುಳಾ ಪಾಟೀಲ್, ಶಿಶು ಅಭಿವೃದ್ಧಿ ಅಧಿಕಾರಿ ಶಿವಲಿಂಗಪ್ಪ, ಜವಾಹರ ಬಾಲಭಾವನ ಅಧಿಕಾರಿ ಕೃಷ್ಣಮೂರ್ತಿ, ಶಿಬಿರದ ನಿರ್ದೇಶಕ ರಂಗಾಯಣ ನಿರ್ದೇಶಕ ಯೋಗಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: