ಕರ್ನಾಟಕಪ್ರಮುಖ ಸುದ್ದಿ

ವಿಶ್ವದ ಅತೀ ದೀರ್ಘ ವಾಯುಮಾರ್ಗ ಕ್ರಮಿಸಿ ಇತಿಹಾಸ ನಿರ್ಮಿಸಿದ ನಾಲ್ವರು ಮಹಿಳಾ ಪೈಲಟ್ ಗಳು

ಬೆಂಗಳೂರು,ಜ.11-ಸ್ಯಾನ್‌ ಫ್ರಾನ್ಸಿಸ್ಕೊ- ಬೆಂಗಳೂರು ನಡುವಣ ವಿಶ್ವದ ಅತೀ ದೀರ್ಘ ವಾಯುಮಾರ್ಗದ ವಿಮಾನಯಾನ ಕ್ರಮಿಸಿದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ನಾಲ್ವರು ಮಹಿಳಾ ಪೈಲಟ್‌ ಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಕ್ಯಾಪ್ಟನ್ ಜೋಯಾ ಅಗರ್‌ವಾಲ್‌, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನೊಳಗೊಂಡ ತಂಡ ಹೊಸ ದಾಖಲೆ ನಿರ್ಮಿಸಿದೆ. ಈ ತಂಡ ಉದ್ಘಾಟನಾ ವಿಮಾನ ಸಂಚಾರದ ಸಾರಥ್ಯ ವಹಿಸಿತ್ತು.

ಮಹಿಳಾ ಪೈಲಟ್‌ಗಳ ನಿರ್ವಹಣೆಯ ವಿಮಾನವು ಉತ್ತರ ಧ್ರುವದ ಮೇಲೆ ಹಾರಿ, ಅಟ್ಲಾಂಟಿಕ್ ಮಾರ್ಗದ ಮೂಲಕ, 16,000 ಕಿ.ಮೀ ದೂರವನ್ನು ಕ್ರಮಿಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಸ್ಯಾನ್‌ ಫ್ರಾನ್ಸಿಸ್ಕೊ – ಬೆಂಗಳೂರು ನಡುವಿನ ಮಾರ್ಗವು ವಿಶ್ವದ ಅತ್ಯಂತ ದೀರ್ಘ ವಾಯು ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳು ಭೂಮಿಯ ಮೇಲಿನ ದುರ್ಗಮ ಪ್ರದೇಶ ಎನ್ನುವ ಉತ್ತರ ಧ್ರುವವನ್ನು ದಾಟಿ ಬರುತ್ತವೆ.

ಶನಿವಾರ ರಾತ್ರಿ 8.30ಕ್ಕೆ (ಸ್ಥಳೀಯ ಸಮಯ) ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಿಂದ ಹೊರಟ ಎಐ 176 ವಿಮಾನ,  ಸೋಮವಾರ (ಸ್ಥಳೀಯ ಸಮಯ) ಮುಂಜಾನೆ 4ಗಂಟೆ ಸುಮಾರಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಈ ಬಗ್ಗೆ ಪೈಲಟ್ ಗಳು ತಮ್ಮ ಅನುಭವವನ್ನು ಹೇಳಿಕೊಂಡಿರುವುದಲ್ಲದೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ ಜೊಯಾ ಅಗರ್ವಾಲ್ ಅವರು, ಉತ್ತರ ಧ್ರುವವನ್ನು ಹಾದು ಬರುವುದು ಮಾತ್ರವಲ್ಲ, ಅದನ್ನು ಮಹಿಳಾ ಪೈಲಟ್‌ಗಳೇ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಿದ್ದೇವೆ. ಈ ಸಾಧನೆಯ ಭಾಗವಾಗಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಹೆಮ್ಮೆ ಎನಿಸಿದೆ. ಈ ಮಾರ್ಗವು 10 ಟನ್ ಇಂಧನವನ್ನು ಉಳಿಸಿದೆ ಎಂದು ಹೇಳಿದ್ದಾರೆ.

ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರು, ಇದು ಹಿಂದೆಂದೂ ನಡೆಯದೇ ಇದ್ದ ವಿದ್ಯಮಾನ. ಈ ಸಾಹಸ ರೋಮಾಂಚಕಾರಿ ಅನುಭವ ನೀಡಿತು. ಸ್ಯಾನ್‌ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬರಲು ಸುಮಾರು 17 ಗಂಟೆಗಳು ಬೇಕಾಯಿತು ಎಂದಿದ್ದಾರೆ.

ಇವರ ಈ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋಗಳನ್ನು, ಇವರ ಕುರಿತಾದ ಸುದ್ದಿಯನ್ನು ಹಂಚಿಕೊಂಡು ಸಾಧನೆಯನ್ನು ಶಾಘ್ಲಿಸುತ್ತಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: