ಕ್ರೀಡೆಪ್ರಮುಖ ಸುದ್ದಿವಿದೇಶ

ಬ್ಯಾಡ್ಮಿಂಟನ್ ಸ್ಪರ್ಧೆಗಳಿಗೆ ಥಾಯ್ಲೆಂಡ್ ಓಪನ್‌ ಸೂಪರ್ 1000 ಟೂರ್ನಿಯ ಮೂಲಕ ಸಿಗಲಿದೆ ಚಾಲನೆ

ವಿದೇಶ( ಬ್ಯಾಂಕಾಕ್)ಜ.12:- ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆಗಳಿಗೆ ಥಾಯ್ಲೆಂಡ್ ಓಪನ್‌ ಸೂಪರ್ 1000 ಟೂರ್ನಿಯ ಮೂಲಕ ಚಾಲನೆ ದೊರೆಯಲಿದೆ.ಕೋವಿಡ್‌ -19 ಪಿಡುಗಿನ ಹಿನ್ನೆಲೆಯಲ್ಲಿ ಸುಮಾರು 10 ತಿಂಗಳುಗಳಿಂದ ಸ್ಥಗಿತಗೊಂಡಿತ್ತು.
ಇಂದಿನಿಂದ ಆರಂಭವಾಗುವ ಈ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಕಣಕ್ಕಿಳಿಯಲಿದ್ದಾರೆ. ಜಪಾನ್ ಹಾಗೂ ಚೀನಾ ತಂಡಗಳು ಹಿಂದೆ ಸರಿದಿರುವ ಕಾರಣ ಟೂರ್ನಿಗೆ ಅಷ್ಟೊಂದು ಕಳೆ ಇರಲಾರದು.
ಕಳೆದ ಎರಡು ತಿಂಗಳಿನಿಂದ ಲಂಡನ್ ‌ನಲ್ಲಿ ತರಬೇತಿ ನಿರತರಾಗಿದ್ದ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದು, ಕೋವಿಡ್‌-19 ಪಿಡುಗಿಗೆ ತುತ್ತಾಗಿದ್ದ ಸೈನಾ ಚೇತರಿಸಿಕೊಂಡಿದ್ದು, ಉತ್ತಮ ಸಾಮರ್ಥ್ಯ ತೋರುವ ಹಂಬಲದಲ್ಲಿದ್ದಾರೆ.
ಕಳೆದ ವರ್ಷದ ಮಾರ್ಚ್‌ನಲ್ಲಿ ಆಲ್ ಇಂಗ್ಲೆಂಡ್‌ ಓಪನ್‌ ಚಾಂಪಿಯನ್‌ಷಿಪ್ ಮುಗಿದ ಬಳಿಕ ಬಹುತೇಕ ಟೂರ್ನಿಗಳು ಸ್ಥಗಿತಗೊಂಡಿದ್ದವು. ಡೆನ್ಮಾರ್ಕ್‌ ಓಪನ್ ಹಾಗೂ ಸಾರ್‌ಲೊರ್ ಲಕ್ಷ್‌ ಟೂರ್ನಿಗಳು ನಡೆದಿದ್ದರೂ ಸಿಂಧು ಮತ್ತು ಸೈನಾ ಅವುಗಳಲ್ಲಿ ಸ್ಪರ್ಧಿಸಿರಲಿಲ್ಲ.
ಸಿಂಧು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ ನ ಮಿಯಾ ಬ್ಲಿಚ್‌ ಫೆಲ್ಟ್‌ ಅವರನ್ನು ಎದುರಿಸಲಿದ್ದರೆ, ಸೈನಾ ಅವರಿಗೆ ಮಲೇಷ್ಯಾದ ಕಿಸೋನಾ ಸೆಲ್ವಾಡುರಾಯ್‌ ಮುಖಾಮುಖಿಯಾಗಲಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: